ನವದೆಹಲಿ: ಭಾರತದ ಯಾತ್ರಿಗಳಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಚೀನಾ ಅಥವಾ ನೇಪಾಳ ಮಾರ್ಗವನ್ನು ಅವಲಂಬಿಸದೇ 2023ರ ಡಿಸೆಂಬರ್ ಹೊತ್ತಿಗೆ ದೇಶಿಯ ಮಾರ್ಗದಲ್ಲೇ ಕೈಲಾಶ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಬಹುದೆಂದು ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಉತ್ತರಾಖಂಡದ ಪಿತೋರಗಢದ ಗುಡ್ಡಗಾಡು ಪ್ರದೇಶದಲ್ಲಿ ಕೊರೆಯಲಾದ ರಸ್ತೆಯು ನೇರವಾಗಿ ಮಾನಸ ಸರೋವರಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಅಲ್ಲದೆ, ಈ ರಸ್ತೆಯಿಂದ ಸಮಯ ಉಳಿತಾಯ ಆಗುವುದಲ್ಲದೆ, ಮೃಧುವಾದ ಪ್ರಯಾಣವನ್ನು ಯಾತ್ರಿಗಳಿಗೆ ನೀಡಲಿದೆ. ಈ ಹಿಂದಿನಂತೆ ಯಾವುದೇ ಅಪಾಯಕಾರಿ ಚಾರಣದಂತೆ ಪ್ರಯಾಣ ಇರುವುದಿಲ್ಲ ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಸಚಿವಾಲಯವು ರಸ್ತೆ ಸಂಪರ್ಕವನ್ನು ಹೆಚ್ಚಿಸುತ್ತಿದೆ. ಇದರಿಂದ ಶ್ರೀನಗರ, ದೆಹಲಿ ಅಥವಾ ಮುಂಬೈ ನಡುವಿನ ಪ್ರಯಾಣದ ಸಮಯವನ್ನು ತೀವ್ರ ಕಡಿತಗೊಳ್ಳಲಿದೆ. ಈ ಯೋಜನೆಗಳಿಗೆ 7,000 ಕೋಟಿ ರೂ. ವೆಚ್ಚವಾಗುತ್ತಿದೆ ಎಂದು ಗಡ್ಕರಿ ಸಂಸತ್ತಿಗೆ ತಿಳಿಸಿದರು.
ಲಡಾಕ್‌ನಿಂದ ಕಾರ್ಗಿಲ್, ಕಾರ್ಗಿಲ್‌ನಿಂದ ಝಡ್-ಮೋರ್, ಝಡ್-ಮೋರ್‌ನಿಂದ ಶ್ರೀನಗರ ಮತ್ತು ಶ್ರೀನಗರದಿಂದ ಜಮ್ಮುವಿಗೆ ನಾಲ್ಕು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. Z-Morh ಸಿದ್ಧವಾಗುತ್ತಿದೆ. ಜೋಜಿಲಾ ಸುರಂಗದಲ್ಲಿ ಈಗಾಗಲೇ ಕೆಲಸ ನಡೆಯುತ್ತಿದೆ. ಸುಮಾರು 1,000 ಕಾರ್ಮಿಕರು ಪ್ರಸ್ತುತ ಸ್ಥಳದಲ್ಲಿದ್ದಾರೆ. ಯೋಜನೆ ಪೂರ್ಣಗೊಳಿಸಲು 2024ರ ಗಡುವು ನೀಡಿದ್ದೇನೆ ಎಂದು ಸಚಿವರು ತಿಳಿಸಿದರು.
ನಿರ್ಮಾಣ ಹಂತದಲ್ಲಿರುವ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇ ದೆಹಲಿ ಮತ್ತು ಶ್ರೀನಗರ ನಡುವಿನ ಪ್ರಯಾಣವನ್ನು ಕೇವಲ ಎಂಟು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ ಎಂದು ಗಡ್ಕರಿ ಹೇಳಿದರು. ಅಲ್ಲದೆ, ನಮ್ಮ ಸಚಿವಾಲಯವೂ 28 ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ವಿಮಾನದ ತುರ್ತು ಲ್ಯಾಂಡಿಂಗ್ ಸೌಲಭ್ಯವು ಇದರಲ್ಲಿ ಇರಲಿದೆ. ಡ್ರೋನ್ಗಳನ್ನು ಕೂಡ ಲ್ಯಾಂಡ್ ಮಾಡಬಹುದು. ಅಪಘಾತದ ಸಂದರ್ಭದಲ್ಲಿ ಹೆಲಿಕಾಪ್ಟರ್ ಆಯಂಬುಲೆನ್ಸ್ ಕೂಡ ಲ್ಯಾಂಡ್ ಮಾಡಲು ಅನುಕೂಲಕರವಾಗಲಿದೆ ಎಂದು ತಿಳಿಸಿದರು.