ಲಖನೌ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೋರಖ್ ಪುರ ನಗರ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಯೋಗಿ ಆದಿತ್ಯನಾಥ್ ಅವರು ಯುಪಿ ವಿಧಾನ ಪರಿಷತ್ ಅಧ್ಯಕ್ಷರನ್ನು ಭೇಟಿಯಾಗಿ ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದೇ ವೇಳೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅಜಾಂ ಖಾನ್ ಸಹ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕರ್ಹಾಲ್ ನಿಂದ ಅಖಿಲೇಶ್ ಹಾಗೂ ರಾಮಪುರ ವಿಧಾನಸಭೆ ಕ್ಷೇತ್ರದಿಂದ ಅಜಾಂ ಖಾನ್ ಗೆಲುವು ಸಾಧಿಸಿದ್ದರು.
ಉತ್ತರಪ್ರದೇಶದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ದ ತಮ್ಮ ಪಕ್ಷವನ್ನು ಗೆಲ್ಲಿಸುವಲ್ಲಿ ಸೋತಿದ್ದ ಅಖಿಲೇಶ್ ಯಾದವ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಲೋಕಸಭಾ ಸಭಾಪತಿ ಓಂ ಬಿರ್ಲಾಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ 111 ಸೀಟ್ ಗೆದ್ದು 2 ನೇ ಪಕ್ಷವಾಗಿರುವ ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ವಿರೋಧ ಪಕ್ಷದ ನಾಯಕರಾಗಿ ಕೂರಲಿದ್ದಾರೆ.
2ನೇ ಬಾರಿಗೆ ಯೋಗಿ ಆದಿತ್ಯನಾಥ್ ಎದುರು ಸೋತ ಬಳಿಕ ಅಖಿಲೇಶ್ ಯಾದವ್ 2027ರ ಉತ್ತರ ಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿದ್ದು ಈಗಿನಿಂದಲೆ ರಾಮನ ನೆಲದಲ್ಲಿ ಬಿಜೆಪಿ ಸೇರಿದಂತೆ ಯೋಗಿ ಆದಿತ್ಯನಾಥ್ ರನ್ನ ಎದುರಿಸಲು ಮುಂದಾಗಿದ್ದಾರೆ.
2015 ರ ಲೋಕಸಭೆಯಲ್ಲಿ ಅಜಮ್ ಘರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅಖಿಲೇಶ್ ಯಾದವ್ ಕಳೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮಾರ್ಚ್ ನಲ್ಲಿ ನಡೆದ ಚುನಾವಣೆಯಲ್ಲಿ ಉತ್ತರಪ್ರದೇಶದ 403 ಕ್ಷೇತ್ರಗಳ ಪೈಕಿ ಎಸ್ ಪಿ 111 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು. ಬಿಜೆಪಿ 255 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಮೈತ್ರಿ ಪಡೆ 273 ಸ್ಥಾನಗಳಲ್ಲಿ ಗೆದ್ದಿದೆ.