ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿದ್ದು, ದಾಳಿಯನ್ನು ತೀವ್ರಗೊಳಿಸಿದೆ. ಮರಿಯುಪೋಲ್ ನಗರದ ಮೇಲೆ ರಷ್ಯಾ ಕೆಲವು ದಿನಗಳಿಂದ ಶೆಲ್ ದಾಳಿ ನಡೆಸುತ್ತಿವೆ. ಈ ನಡುವೆ ರಷ್ಯಾ ಎರಡು ಶಕ್ತಿಶಾಲಿ ಬಾಂಬ್ ಗಳನ್ನು ಮರಿಯುಪೋಲ್ ನಗರದ ಮೇಲೆ ಪ್ರಯೋಗಿಸಿದ್ದಾಗಿ ತಿಳಿದುಬಂದಿದೆ.
ಸ್ಫೋಟದ ತೀವ್ರತೆ ನಗರದಾದ್ಯಂತ ಅನುಭವಕ್ಕೆ ಬಂದಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ನಗರದ ಆಯಕಟ್ಟಿ ಜಾಗಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಅವರ ರಕ್ಷಣೆ ಬಗ್ಗೆ ಮಾನವ ಹಕ್ಕುಗಳ ಕಾವಲುಪಡೆ ಆತಂಕ ವ್ಯಕ್ತಪಡಿಸಿದೆ.
'ಆಕ್ರಮಣಕಾರರು ಮರಿಯುಪೋಲ್ ನಗರವನ್ನು ಧ್ವಂಸ ಮಾಡುವುದೇ ರಷ್ಯಾದ ಗುರಿಯಾಗಿದೆ. ನಾಗರಿಕರ ಹಿತರಕ್ಷಣೆ ಅವರಿಗೆ ಬೇಕಿಲ್ಲ' ಎಂದು ಅಧಿಕಾರಿಗಳು ದೂರಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಯುದ್ಧ ಕೊನೆಗೊಳಿಸಲು ಪೋಪ್ ಫ್ರಾನ್ಸಿಸ್ ಸಹಾಯ ಕೋರಿದ್ದಾರೆ. ಬಿಕ್ಕಟ್ಟು ಶಮನಕ್ಕೆ ಮಧ್ಯಸ್ಥಿಕೆ ವಹಿಸಲು ಮತ್ತು ಸಾವುನೋವನ್ನು ಕೊನೆಗೊಳಿಸಲು ಸಹಾಯ ಮಾಡಬೇಕೆಂದು ಜೆಲೆನ್ಸ್ಕಿ ಪೋಪ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.