ಲಖೀಂಪುರ ಖೇರಿ : ಉತ್ತರ ಪ್ರದೇಶದ ಲಖೀಂಪುರ ಖೇರಿಯ ಎಂಟೂ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ನಡೆದು, ವಿಶ್ವವ್ಯಾಪಿ ಲಖೀಂಪುರ ಖೇರಿ ಗಮನ ಸೆಳೆದಿತ್ತು.
ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿಕೊಂಡು ನಡೆದಿದ್ದ ಈ ಪ್ರತಿಭಟನೆಯ ನಂತರ ಬಿಜೆಪಿ ಒಂದೂ ಸ್ಥಾನವನ್ನು ಗೆಲ್ಲಲಾರದು ಎಂದು ಕಾಂಗ್ರೆಸ್ ಸೇರಿದಂತೆ ಬಹುತೇಕ ಎಲ್ಲಾ ಪಕ್ಷಗಳೂ ಅಂದುಕೊಂಡಿದ್ದವು.
ರೈತರ ಹೆಸರಿನಲ್ಲಿ ನಡೆದಿದ್ದ ಪ್ರತಿಭಟನೆ ಆ ನಂತರ ನಡೆದ ಹಿಂಸಾಚಾರಗಳಿಂದ ವಿದೇಶದಲ್ಲಿಯೂ ಭಾರತದ ವಿರುದ್ಧ ದನಿ ಎತ್ತುವ ಸ್ಥಿತಿ ನಿರ್ಮಾಣವಾಗಿತ್ತು. ಮಾತ್ರವಲ್ಲದೇ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಈ ಘಟನೆಯ ಬಳಿಕ ದೊಡ್ಡ ಮಟ್ಟದ ಹಿಂಸಾಚಾರ ಉಂಟಾಗಿ ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದಾರೆ.
ಇವೆಲ್ಲಾ ನಡೆದ ಬಳಿಕ ಬಿಜೆಪಿ ವಿರುದ್ಧ ಮತದಾರರು ಭಾರಿ ಅಸಮಾಧಾನಗೊಂಡಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಎಲ್ಲಾ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿದ್ದು, ಅಚ್ಚರಿ ಎಂದರೆ ಇಲ್ಲಿರುವ ಎಂಟೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ. ಹಿಂಸಾಚಾರ ನಡೆದ ನಿಘಾಸನ್ ಕ್ಷೇತ್ರದಲ್ಲಿ ಬಿಜೆಪಿಯ ಶಶಾಂಕ್ ವರ್ಮಾ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.
ಅಂದಹಾಗೆ,. 2017 ರಲ್ಲಿ ಕೂಡ ಲಖೀಂಪುರ್ನ ಪಾಲಿಯಾ, ನಿಗಾಸನ್, ಗೋಲಾ ಖೋರಾನಾಥ್, ಶ್ರೀನಗರ, ಧೌರಾಹ್ರಾ, ಲಖಿಂಪುರ, ಕಸ್ತಾ ಮತ್ತು ಮೊಹಮ್ಮದಿಯಲ್ಲಿ ಬಿಜೆಪಿ ಗೆದ್ದಿತ್ತು.