ನವದೆಹಲಿ: ಅಕ್ರಮ ಮತದಾನ ತಡೆಗಟ್ಟಲು ಮತ್ತು ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಆನ್‌ಲೈನ್ ಮತದಾನದ ಹಕ್ಕು ನೀಡಲು ಮತದಾರರ ಪಟ್ಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಸ್ತಾಪವನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.
ಚುನಾವಣಾ ವಂಚನೆ ಗಂಭೀರ ವಿಷಯವಾಗಿದ್ದು, ಇದನ್ನು ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕೇಂದ್ರ ಕಾನೂನು ಸಚಿವರು ಹೇಳಿದ್ದಾರೆ.
“ಅಕ್ರಮ ಮತದಾನ ತಡೆಯಲು ಆಧಾರ್ ಅನ್ನು ಮತದಾರರ ಪಟ್ಟಿಯೊಂದಿಗೆ ಲಿಂಕ್ ಮಾಡುವುದು ಒಂದು ಮಾರ್ಗವಾಗಿದೆ. ಈಗಿನಂತೆ, ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಸ್ವಯಂಪ್ರೇರಿತವಾಗಿದೆ. ಮತದಾರರ ಪಟ್ಟಿಯಲ್ಲಿ ಎರಡು ಹೆಸರುಗಳನ್ನು ಪರಿಶೀಲಿಸಲು, ಅಕ್ರಮ ಮತದಾನವನ್ನು ಪರಿಶೀಲಿಸಲು ಮತ್ತು ಪಾರದರ್ಶಕ ಮತದಾನ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ‘ಒಂದು ರಾಷ್ಟ್ರ, ಒಂದು ಮತದಾರರ ಪಟ್ಟಿ’ಯನ್ನು ಸಿದ್ಧಪಡಿಸುವುದು ನಮ್ಮ ಗುರಿಯಾಗಿದೆ, ”ಎಂದು ಅವರು ಹೇಳಿದ್ದಾರೆ.
ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಮತದಾನದ ಹಕ್ಕು ನೀಡುವ ಪ್ರಸ್ತಾಪದ ಕುರಿತು ಪ್ರತಿಕ್ರಿಯಿಸಿದ ರಿಜಿಜು, ಇದನ್ನು ಹೇಗೆ ಮಾಡಬಹುದು ಎಂಬುದನ್ನು ಪರಿಶೀಲಿಸಲು ಸರ್ಕಾರ ಚುನಾವಣಾ ಆಯೋಗಕ್ಕೆ ಸೂಚಿಸಿದೆ ಎಂದರು.
"ಆದರೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನಾವು ಪ್ರಕ್ರಿಯೆಯ ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಚಿತಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಒಂದು ಮಾರ್ಗವಾಗಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ತಿಳಿಸಿದರು.