ನವದೆಹಲಿ : ಖಾಸಗಿ ಮತ್ತು ವೈಯಕ್ತಿಕ ದತ್ತಾಂಶ (ಡೇಟಾ) ಸಂರಕ್ಷಣೆಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ಧಿಗೊಳಿಸಬೇಕೆಂದು ಯುರೋಪ್ ಒಕ್ಕೂಟ ಹಾಗೂ ಭಾರತ ಸೇರಿದಂತೆ 9 ದೇಶಗಳು ವಿಶ್ವಸಮುದಾಯಕ್ಕೆ ಕರೆ ನೀಡಿವೆ.
ತ್ವರಿತವಾದ ತಾಂತ್ರಿಕ ಬೆಳವಣಿಗೆಗಳು ಅದರಲ್ಲೂ ನಿರ್ದಿಷ್ಟವಾದ ಮಾಹಿತಿ ಹಾಗೂ ಡಿಜಿಟಲ್ ತಂತ್ರಜ್ಞಾನಗಳು ತಮ್ಮ ಆರ್ಥಿಕತೆ ಹಾಗೂ ಸಮಾಜಗಳಿಗೆ ಲಾಭಗಳನ್ನು ತಂದುಕೊಟ್ಟಿವೆಯಾದರೂ, ಇದರ ಜೊತೆಗೆ. ಖಾಸಗಿತನ ಹಾಗೂ ವೈಯಕ್ತಿಕ ದತ್ತಾಂಶ ಸುರಕ್ಷತೆಗಾಗಿನ ಹೊಸ ಸವಾಲುಗಳು ಕೂಡಾ ಎದುರಾಗಿವೆ ಎಂದು ಯುರೋಪ್ ಒಕ್ಕೂಟ, ಆಸ್ಟ್ರೇಲಿಯ, ಕೊಮ್ರಾಸ್, ಭಾರತ, ಜಪಾನ್, ಮಾರಿಷಸ್, ನ್ಯೂಝಿಲ್ಯಾಂಡ್, ದಕ್ಷಿಣ ಕೊರಿಯ, ಸಿಂಗಾಪುರ ಹಾಗೂ ಶ್ರೀಲಂಕಾ ದೇಶಗಳು 'ಖಾಸಗಿತನ ಹಾಗೂ ವೈಯಕ್ತಿಕ ದತ್ತಾಂಶ ಸಂರಕ್ಷಣೆ: ಡಿಜಿಟಲ್ ಪರಿಸರದಲ್ಲಿ ವಿಶ್ವಾಸ ಬಲಪಡಿಸುವಿಕೆ' ಕುರಿತ ಜಂಟಿ ಘೋಷಣೆಯಲ್ಲಿ ತಿಳಿಸಿವೆ.
ದತ್ತಾಂಶಗಳ ನಿರ್ವಹಣೆಯಲ್ಲಿನ ವಿಶ್ವಾಸದ ಕೊರತೆಯಿಂದಾಗಿ ತಮ್ಮ ವೈವಿಧ್ಯಮಯ ಸಮುದಾಯಗಳು, ಆರ್ಥಿಕತೆಗಳ ಮೇಲೆ ಎಷ್ಟರ ಮಟ್ಟಿಗೆ ನಕಾರಾತ್ಮಕ ಪರಿಣಾಮವನ್ನು ಬೀರಿದೆಯೆಂದರೆ ವ್ಯಕ್ತಿಗಳು ಹಾಗೂ ಸಮುದಾಯಗಳು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ. ಸಾರ್ವಜನಿಕ ಇಲಾಖೆಗಳು ತಮ್ಮ ಖಾಸಗಿ ದತ್ತಾಂಶಗಳನ್ನು ವಿದೇಶಿ ಪಾಲುದಾರರ ಹಾಗೂ ವಾಣಿಜ್ಯ ವಿನಿಮಯ ಸಂಸ್ಥೆಗಳ ಜೊತೆ ಹಂಚಿಕೊಳ್ಳಲು ಹಿಂಜರಿಯುತ್ತಿವೆ ಎಂದು ಅವು ಆತಂಕ ವ್ಯಕ್ತಪಡಿಸಿವೆ.
ಸುಸ್ಥಿರ ಅಭಿವೃದ್ಧಿ ಹಾಗೂ ಅದರ ಗುರಿಗಳ ಕುರಿತಾದ ವಿಶ್ವಸಂಸ್ಥೆಯ 2030ರ ಕಾರ್ಯಸೂಚಿಯನ್ನು ಸಾಧಿಸುವಲಿ ಡಿಜಿಟಲ್ ಕ್ರಾಂತಿಯು ಮಹತ್ವಾದ್ದಾಗಿದೆ. ಆದರೆ ''ಒಟ್ಟಾರೆಯಾಗಿ ವಿಶ್ವಾಸದ ಕೊರತೆಯಿಂದಾಗಿ ನಮ್ಮ ಸಮಾಜಗಳಿಗೆ ಡಿಜಿಟಲ್ ಕ್ರಾಂತಿಯ ಪ್ರಯೋಜನಗಳನ್ನು ಸಂಪೂರ್ಣವಾಗಿ ಅಪ್ಪಿಕೊಳ್ಳಲು ಹಾಗೂ ಸಾಕಾರಗೊಳಿಸಳು ಸಾಧ್ಯವಾಗುತ್ತಿಲ್ಲ' ಎಂದು ಘೋಷಣೆ ತಿಳಿಸಿದೆ.
''ಇಂತಹ ಪರಿವರ್ತನೆಗಾಗಿ ನಾವು ಮಾನವ ಕೇಂದ್ರಿತ ನಿಲುವನ್ನ ಹೊಂದುವ ಸಾಮಾನ್ಯ ಇಂಡೋ-ಪೆಸಿಫಿಕ್ ಪ್ರಾಂತದಲ್ಲಿ ಅತ್ಯಧಿಕ ದತ್ತಾಂಶ ಸಂರಕ್ಷಣೆಯನ್ನು ಹಾಗೂ ಖಾಸಗಿತನದ ಮಾನದಂಡಗಳನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಉದ್ದೇಶವನ್ನು ತಾವು ಹೊಂದಿರುವುದಾಗಿ ಜಂಟಿ ಘೋಷಣೆ ತಿಳಿಸಿದೆ.