ಕಾಸರಗೋಡು: ಮೂಲ ಸೌಕರ್ಯಗಳಿಗೆ ಆದ್ಯತೆ ಕಲ್ಪಿಸುವ ಯೋಜನೆಗಳೊಂದಿಗೆ ಕಾಸರಗೋಡು ನಗರಸಭೆ 2022-23ನೇ ಸಾಲಿಗಿರುವ ಮಿಗತೆ ಬಜೆಟನ್ನು ಉಪಾಧ್ಯಕ್ಷೆ ಶಂಸೀದಾ ಫಿರೋಜ್ ಶನಿವರ ಮಂಡಿಸಿದರು. ರಸ್ತೆ, ಕುಡಿಯುವ ನೀರು, ತ್ಯಾಜ್ಯ ಸಂಸ್ಕರಣೆಗೆ ಮೊದಲ ಆದ್ಯತೆ ನೀಡಲಾಗಿದೆ. ಕಾಸರಗೋಡು ನಗರದ ರಸ್ತೆಗಳ ಕಾಂಕ್ರೀಟೀಕರಣ, ಒಳಚರಂಡಿ ನಿರ್ಮಾಣ, ಹೊಸ ಬಸ್ ನಿಲ್ದಾಣ ಪ್ರದೇಶದ ರಸ್ತೆಗಳ ಅಭಿವೃದ್ಧಿ, ನಗರಸಭೆ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ಸೇರಿದಂತೆ 1.30ಕೋಟಿ ರಊ. ಮೀಸಲಿರಿಸಲಾಗಿದೆ.
ಒಟ್ಟು 439080481ರೂ. ಆದಾಯ ಮತ್ತು 489309426ರೂ. ವೆಚ್ಚ ಹೊಂದಿದ 39153238ರೂ. ಮಿಗತೆ ಬಜೆಟ್ ಇದಾಗಿದೆ.
ಕೃಷಿ ವಲಯದ ಉತ್ತೇಜನಕ್ಕಾಗಿ ವಿವಿಧ ಯೋಜನೆಗಳನ್ನೂ ಬಜೆಟ್‍ನಲ್ಲಿ ಅಳವಡಿಸಿಕೊಳ್ಳಲಾಗಿದೆ. ಅಣಬೆ, ಆಂತೋರಿಯಂ, ಮಲ್ಲಿಗೆ, ಜೇನು ಸಾಕಣೆ, ಕಲ್ಲಂಗಡಿ ಸೇರಿದಂತೆ ಕೃಷಿ ತೋಟಗಳಲ್ಲಿ ಬಳ್ಳಿತರಕಾರಿ ಕೃಷಿ, ತೆಂಗಿನ ತೋಟಗಳಲ್ಲಿ ಉಪ ಕೃಷಿ ನಡೆಸುವುದಕ್ಕಾಗಿ 22ಲಕ್ಷ ರೂ. ಮೀಸಲಿರಿಸಲಾಗಿದೆ. ಪಶುಸಂಗೋಪನೆ, ಶಿಕ್ಷಣ, ಕ್ರೀಡೆ, ಆರೋಗ್ಯ, ತ್ಯಾಜ್ಯ ಸಂಸ್ಕರಣೆ, ಸಾಂಸ್ಕøತಿಕ ವಲಯದ ಉತ್ತೇಜನ, ವಿಕಲಚೇತನರ ಕಲ್ಯಾಣ, ಜೈವಿಕ ವೈವಿಧ್ಯ ಸಂರಕ್ಷಣೆ, ಕೈಗಾರಿಕೆ, ಅಯ್ಯಂಗಾಳಿ ಉದ್ಯೋಗ ಖಾತ್ರಿ ಯೋಜನೆ, ಮೀನುಗಾರಿಕೆ, ಪ.ಜಾತಿ-ಪ.ವರ್ಗ ಅಭಿವೃದ್ಧಿ, ಮಣ್ಣು-ಜಲ ಸಂರಕ್ಷಣೆ, ಕುಡಿಯುವ ನೀರು ಸೇರಿದಂತೆ ಎಲ್ಲ ವಲಯಗಳ ಅಭಿವೃದ್ಧಿಗೂ ಮೊತ್ತ ಮೀಸಲಿರಿಸಲಾಗಿದೆ. ಮಹಿಳಾ ಅಭಿವೃದ್ಧಿ-ಕುಟುಂಬಶ್ರೀ ಮೂಲಕ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಮಹಿಳೆಯರ ವಿಶ್ರಾಂತಿಕೇಂದ್ರ 'ಶೀ ಲಾಡ್ಜ್'ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿದರು. ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ. ಮುನೀರ್ ಅಧ್ಯಕ್ಷತೆ ವಹಿಸಿದ್ದರು.
ಬಜೆಟ್ ನಿರಾಶಾದಾಯಕ:
ಕಾಸರಗೋಡು ನಗರಸಭೆ ಮಂಡಿಸಿರುವ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು, ಸಮಗ್ರ ಅಭಿವೃದ್ಧಿ ಮರೀಚಿಕೆಯಾಗಿದೆ. ಅಭಿವೃದ್ಧಿಕಾರ್ಯಗಳಲ್ಲಿ ಪ್ರಾದೇಶಕ ತಾರತಮ್ಯ ತೋರುತ್ತಿದ್ದು, ಎಲ್ಲ ವಿಭಾಗಿದ ಜನರನ್ನು ಸಮಾನವಾಗಿ ಪರಿಗಣಿಸದೆ ಒಂದು ಪ್ರದೇಶಕ್ಕೆ ಮಾತ್ರ ಅಭಿವೃದ್ಧಿ ಸೀಮಿತಗೊಳಿಸಲಾಗಿದೆ. ತಳಮಟ್ಟದ ಜನತೆಗೆ ಸವಲತ್ತುತಲುಪಿಸುವಲ್ಲಿ ನಗರಸಭೆ ಪರಾಜಯಗೊಂಡಿರುವುದಾಗಿ ಪ್ರತಿಪಕ್ಷ ಮುಖಂಡ ಪಿ.ರಮೇಶ್ ತಿಳಿಸಿದ್ದಾರೆ. ಸಮಗ್ರ ದೃಷ್ಟಿಕೋನದ ಬಜೆಟ್ ಮಂಡಿಸುವುದರ ಬದಲು ಒಂದು ಕಣ್ಣಿಗೆ ಸುಣ್ಣ, ಇನ್ನೊಂದಕ್ಕೆ ಬೆಣ್ಣೆ ಎಂಬ ರೀತಿಯಲ್ಲಿ ನಗರಸಭೆ ವರ್ತಿಸಿರುವುದಾಗಿ ಬಿಜೆಪಿಯ ಸವಿತಾ ಟೀಚರ್ ಟಈಕಿಸಿದ್ದಾರೆ. ಪ್ರತಿಪಕ್ಷಗಳ ಟೀಕೆಯನ್ನು ಸಂಪೂರ್ಣ ನಿರಾಕರಿಸಿದ ಆಡಳಿತ ಪಕ್ಷದ ಅಬ್ಬಾಸ್ ಬೀಗಂ ಸಮಗ್ರ ಅಭಿವೃದ್ಧಿಯ ಬಜೆಟನ್ನು ಬೆಂಬಲಿಸಿದರು. ಮಲಯಾಳ, ಕನ್ನಡ, ಆಂಗ್ಲ ಭಾಷೆಯಲ್ಲಿ ಬಜೆಟ್ ಮಂಡಿಸಿ ಮಾತನಾಡುವ ಮೂಲಕ ಉಪಾಧ್ಯಕ್ಷೆ ಶಂಸೀದಾ ಫಿರೋಜ್ ಗಮನಸೆಳೆದರು. ನಗರಸಭಾ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.