ಕಾಸರಗೋಡು: ಜಿಲ್ಲೆಯನ್ನು ಏಮ್ಸ್ ಮಂಜೂರಾತಿ ಪಟ್ಟಿಯಲ್ಲಿ ಒಳಪಡಿಸುವಂತೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಕಳೆದ 69ದಿವಸಗಳಿಂದ ನಡೆದುಬರುತ್ತಿರುವ ನಿರಾಹಾರ ಸತ್ಯಾಗ್ರಹ ಮಂಗಳವಾರ ಜ್ವಾಲಾ ಕಾರ್ಯಕ್ರಮವಾಗಿ ಮಾರ್ಪಟ್ಟಿತು.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ತೆರಳಿ ಹಕ್ಕೊತ್ತಾಯ ಸಲ್ಲಿಸಿದರು. ಈ ಸಂದರ್ಭ ಉನ್ನತ ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಐವರು ಮಕ್ಕಳ ತಾಯಂದಿರು ಪಂಜನ್ನು ಬೆಳಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು. ಖ್ಯಾತ ಸಮಾಜ ಸೇವಕಿ, ಎಂಡೋಸಲ್ಫಾನ್ ವಿರುದ್ಧ ಹೋರಾಟದ ಮುಂಚೂಣಿ ನಾಯಕಿ ದಯಾಭಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ತಾಯಂದಿರ ಹೋರಾಟವನ್ನು ಕಂಡೂ ಕಾಣದಂತೆ ವರ್ತಿಸುವುದು ಸರಿಯಲ್ಲ. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮದ ಭೀಕರತೆಯನ್ನು ಅನುಭವಿಸುತ್ತಿರುವ ತಾಯಂದಿರಿಗೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸರ್ಕಾರ ತಯಾರಾಗಬೇಕು ಎಂದು ತಿಳಿಸಿದರು. ಎಂಡೋಸಲ್ಫಾನ್ ದುಷ್ಪರಿಣಾಮದ ಭೀಕರತೆ ಮನದಟ್ಟುಮಾಡಿಕೊಡುವ ಏಕವ್ಯಕ್ತಿ ನಾಟಕವನ್ನು ಪ್ರದರ್ಶಿಸುವ ಮೂಲಕ ದಯಾಭಾಯಿ ಗಮನಸೆಳೆದರು. ಅತ್ಯಾಧುನಿಕ ರೀತಿಯ ಚಿಕಿತ್ಸಾ ಸೌಕರ್ಯವುಳ್ಳ ಒಂದು ಆಸ್ಪತ್ರೆ ಜಿಲ್ಲೆಯಲ್ಲಿದ್ದರೂ, ನಾವಿಂದು ಬೀದಿಗೆ ಬಂದು ಏಮ್ಸ್‍ಗಾಗಿ ಹೋರಾಟ ನಡೆಸುವ ಅನಿವಾರ್ಯತೆ ಬಂದೊದಗುತ್ತಿರಲಿಲ್ಲ ಎಂಬುದಾಗಿ ಸಂತ್ರಸ್ತ ಮಕ್ಕಳ ತಾಯಂದಿರು ಅಳಲು ವ್ಯಕ್ತಪಡಿಸಿದರು. ಏಮ್ಸ್ ಮಂಜೂರಾತಿ ಹೋರಾಟ ಮುಖಂಡರಾದ ನಾಸರ್ ಚೆರ್ಕಳ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಅರಮಂಗಾನ, ವಿ. ಗೋಪಿ, ಸಿಸ್ಟರ್ ಜಯಾ ಆಂಟುಮಂಗಲ, ಅಂಬಲತ್ತರ ಕುಞÂಕೃಷ್ಣನ್ ಮುಂತಾದವರು ಉಪಸ್ಥಿತರಿದ್ದರು.