ನವದೆಹಲಿ: ಮತಗಳ ಎಣಿಕೆಯ ಮೊದಲು ವಿವಿಪ್ಯಾಟ್ ಸ್ಲಿಪ್‍ಗಳನ್ನು ಪರಿಶೀಲಿಸಬೇಕೆಂದು ಚುನಾವಣಾ ಆಯೋಗಕ್ಕೆ ಸೂಚಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ವಿವಿಪ್ಯಾಟ್ ಪರಿಶೀಲನೆಗಾಗಿ ಐದು ಬೂತ್ ಗಳನ್ನು ಆರಿಸುವ ಪ್ರಸ್ತುತ ಪದ್ಧತಿಯನ್ನು ಪರಿಷ್ಕರಿಸಿ ವಿವಿಪ್ಯಾಟ್ ಸ್ಲಿಪ್ ಪರಿಶೀಲಿಸಲಾಗುವ ಬೂತುಗಳ ಸಂಖ್ಯೆಯನ್ನು 25ಕ್ಕೆ ಅಥವಾ ಆಯಾ ವಿಧಾನಸಭಾ ಕ್ಷೇತ್ರಕ್ಕೆ ಅನುಗುಣವಾಗಿ ಏರಿಸಬೇಕೆಂದೂ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.
ಮಂಗಳವಾರದ ವಿಚಾರಣೆ ವೇಳೆ ಹಾಜರಿದ್ದ ಚುನಾವಣಾ ಆಯೋಗ ಪರ ವಕೀಲ ಮಣೀಂದರ್ ಸಿಂಗ್, ವಿವಿಪ್ಯಾಟ್ ಪರಿಶೀಲನೆಯ 2019 ಆದೇಶವನ್ನು ಚುನಾವಣಾ ಆಯೋಗ ಅನುಸರಿಸುತ್ತಿದೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಅದೇ ಪ್ರಕಾರ ತರಬೇತಿ ನೀಡಲಾಗಿದೆ. ವಿಧಾನಸಭಾ ಚುನಾವಣೆಗಳು ನಡೆದ ಗೋವಾ, ಮಣಿಪುರ, ಉತ್ತರ ಪ್ರದೇಶ ಉತ್ತರಾಖಂಡ ಮತ್ತು ಪಂಜಾಬ್‍ಗೆ ಈಗಾಗಲೇ ಎಣಿಕೆ ತಂಡಗಳನ್ನು ಕಳುಹಿಸಲಾಗಿರುವುದರಿಂದ ಈಗ ಯಾವುದೇ ಬದಲಾವಣೆ ಅಸಾಧ್ಯ ಎಂದು ಅವರು ಹೇಳಿದರು.
ನ್ಯಾಯಾಲಯ ಆರಂಭದಲ್ಲಿ ಈ ಅರ್ಜಿ ಮೇಲೆ ವಿಚಾರಣೆ ನಡೆಸಲು ಒಪ್ಪಿತ್ತಾದರೂ ಚುನಾವಣಾ ಆಯೋಗದ ವಕೀಲರು ನೀಡಿದ ಮಾಹಿತಿಯ ನಂತರ ತನ್ನ ನಿರ್ಧಾರದಿಂದ ಹಿಂದೆ ಸರಿದು ಅರ್ಜಿ ವಿಚಾರಣೆ ನಡೆಸದೇ ಇರಲು ನಿರ್ಧರಿಸಿದೆ.
"ನಾವು ಹಸ್ತಕ್ಷೇಪ ನಡೆಸುವುದಿಲ್ಲ. ಈಗಿನ ನಿಯಮದಂತೆಯೇ ಮತ ಎಣಿಕೆ ನಡೆಯಲಿ" ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರ ಪೀಠ ಹೇಳಿದೆ. ಮುಂದೆ ಯಾವಾಗಲಾದರೂ ಅರ್ಜಿಯ ವಿಚಾರಣೆ ನಡೆಸುವ ಕುರಿತು ಪರಿಶೀಲಿಸಲಾಗುವುದು ಎಂದೂ ನ್ಯಾಯಾಲಯ ಹೇಳಿದೆ.