ಮಧೂರು: ಭಗವಂತನ ನಾಮ ಸಂಕೀರ್ತನೆಯಿಂದ ಜೀವನದಲ್ಲಿ ನೆಮ್ಮದಿ, ಶಾಂತಿ ಸಿಗುತ್ತದೆ ಎಂದು ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.
ಇತಿಹಾಸ ಪ್ರಸಿದ್ಧವಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ 48 ದಿನಗಳ ಕಾಲ ನಡೆಯುವ ನಿತ್ಯ ಭಜನೆ ಮಂಡಲ ಸಂಕೀರ್ತನೋತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸ್ವಾಮೀಜಿಯವರು ಆಶೀರ್ವಚನವಿತ್ತರು.
ಭಜನಾ ಮಹೋತ್ಸವ 48 ದಿನಕ್ಕೆ ಸೀಮಿತಗೊಳ್ಳದೆ ನೂರೆಂಟು ದಿನಗಳ ವರೆಗೆ ಮುಂದುವರಿಯಲಿ ಎಂದು ಅವರು ಹೇಳಿದರು.
ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಸಂಕಲ್ಪದಂತೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಆಯೋಜಿಸಿದ ಮಂಡಲ ಸಂಕೀರ್ತನೋತ್ಸವದಲ್ಲಿ ದೇವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಆಶೀರ್ವಚನವಿತ್ತರು.
ಆಶೀರ್ವಚನ ನೀಡಿದ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿ ಅದ್ಭುತ, ಅಗಮ್ಯ ಚೈತನ್ಯಕ್ಕೆ ನಮ್ಮನ್ನು ತಾವು ಅರ್ಪಿಸಿಕೊಂಡು ಪ್ರೀತಿಯಿಂದ, ಆರಾಧನೆ, ಪೂಜೆ, ಭಜನೆ ಮಾಡುವಂಥ ನೆಲೆಯೇ ಭಕ್ತಿ ಎಂದರು.
ಮಧೂರು ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಯು.ಟಿ.ಆಳ್ವ ಅಧ್ಯಕ್ಷತೆ ವಹಿಸಿದರು. ದೇವಸ್ಧಾನದ ಕಾರ್ಯನಿರ್ವಹಣಾಧಿಕಾರಿ ಎಂ.ಬಾಬು, ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಉಪಾಧ್ಯಕ್ಷ ಡಾ.ಬಿ.ಎಸ್.ರಾವ್, ಕ್ಷೇತ್ರ ಸಂರಕ್ಷಣಾ ಸಮಿತಿಯ ರಾಜ್ಯ ಸದಸ್ಯ ಅಪ್ಪಯ್ಯ ನಾೈಕ್ ಮಧೂರು, ಪ್ರಭಾಶಂಕರ ಮಾಸ್ತರ್, ಸಂತೋಷ್ ಕುಮಾರ್ ಮಧೂರು, ಮಧೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಧವ ಮಾಸ್ತರ್, ಕಾರ್ಯದರ್ಶಿ ಮುರಳಿ ಗಟ್ಟಿ, ಕೋಶಾಧಿಕಾರಿ ಮಂಜುನಾಥ ಕಾಮತ್, ಸಾರಿಗೆ ಉದ್ಯಮಿ ಗಿರೀಶ್, ಕಾರ್ಯದರ್ಶಿ ನಾರಾಯಣಯ್ಯ, ನ್ಯಾಯವಾದಿ ಅನಂತರಾಮ, ವಾಮನ ರಾವ್ ಬೇಕಲ್, ಸುರೇಶ್ ಕಲ್ಲೂರಾಯ, ದೇವಸ್ಥಾನದ ಆಡಳಿತ ವರ್ಗ ಮೊದಲಾದವರು ಉಪಸ್ಥಿತರಿದ್ದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿ, ಮನೋಹರ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಅಣಂಗೂರಿನ ಶ್ರೀ ಲಕ್ಷ್ಮಣಾನಂದ ಸರಸ್ವತೀ ಮಹಿಳಾ ಭಜನಾ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು.