ಕಾಸರಗೋಡು: ಶಿಕ್ಷಣವು ಸಂಪೂರ್ಣವಾಗಿ ವಿದ್ಯಾರ್ಥಿ ಕೇಂದ್ರಿತ ಮತ್ತು ಸಮುದಾಯ ಕೇಂದ್ರಿತವಾಗಿರಬೇಕು. ತಾಂತ್ರಿಕ ಕೌಶಲ್ಯಕ್ಕೆ ಒತ್ತು ನೀಡಿ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ಸಜ್ಜುಗೊಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಹೇಳಿದರು.
ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ನಿರ್ಮಿಸಿರುವ ಅಕಾಡೆಮಿಕ್ ಬ್ಲಾಕ್ ಕಟ್ಟಡವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದುವರಿದ ತಂತ್ರಜ್ಞಾನದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಶಿಕ್ಷಣ ಪಡೆಯಬೇಕು. ಶಿಕ್ಷಣವು ಇಂದು ಹಳತಾದ ಶಿಕ್ಷಣ ಪದ್ಧತಿಯಿಂದ ತಾಂತ್ರಿಕ ಶಿಕ್ಷಣ ವ್ಯವಸ್ಥೆಗೆ ಬದಲಾವಣೆಗಳನ್ನು ಕಂಡಿದೆ. ಮಕ್ಕಳ ಆಂತರಿಕ ಒತ್ತಡ ಕಡಿಮೆ ಮಾಡಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಅದರಲ್ಲಿ ಉದ್ಯೋಗಕ್ಕಾಗಿ ಅಲೆದಾಟವಿರುವುದಿಲ್ಲ. ಉದ್ಯೋಗಗಳನ್ನು ಸೃಷ್ಟಿಸಲು, ಉದ್ಯಮಶೀಲತೆಯತ್ತ ತಿರುಗಿ ಉದ್ಯೋಗದಾತರಾಗಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ಅದಕ್ಕಾಗಿ ಕಾಲೇಜು ಹಾಗೂ ಶಿಕ್ಷಕ ಸಮುದಾಯ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು ಎಂದರು.
ಕೃಷಿ, ಕೈಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸುಧಾರಿಸುವ ರೀತಿಯಲ್ಲಿ ಕೇರಳದ ಆರ್ಥಿಕತೆಗೆ ಕೊಡುಗೆ ನೀಡುವ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕು. ಉನ್ನತ ಶಿಕ್ಷಣದ ನಂತರ ಮಕ್ಕಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಪ್ರವೃತ್ತಿ ನಿಲ್ಲಬೇಕು. ಕೇರಳದ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ಕೇರಳವೇ ಬಳಸಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ನೆಹರು ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಬೈರ್ ಕಮ್ಮಡತ್, ಕಾರ್ಯದರ್ಶಿ ಕೆ.ರಾಮನಾಥನ್, ಖಜಾಂಚಿ ವಿ.ಪಿ.ದಿವಾಕರನ್ ನಂಬಿಯಾರ್, ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಎ.ಅಶೋಕನ್, ಸೆನೆಟ್ ಸದಸ್ಯ ಡಾ. ಕೆ.ಎಸ್.ಸುರೇಶ್ ಕುಮಾರ್, ಪಿಟಿಎ ಕಾರ್ಯದರ್ಶಿ ಡಾ. ಪಿ.ಕೆ.ಪ್ರಜಿತ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವನ್ ಕುಳಂಗರ, ಕಾಲೇಜು ಜೂನಿಯರ್ ಅಧೀಕ್ಷಕ ಪಿ.ಕೆ.ಬಾಲಗೋಪಾಲನ್, ಕಾಲೇಜು ಯೂನಿಯನ್ ಅಧ್ಯಕ್ಷ ಪಿ.ಪಿ.ಅನಂತು ಮಾತನಾಡಿದರು. ಕಾಲೇಜಿನ ವ್ಯವಸ್ಥಾಪಕ ಡಾ. ಡಾ.ಕೆ.ವಿಜಯರಾಘವನ್ ಸ್ವಾಗತಿಸಿ, ಕಾಲೇಜು ಮಟ್ಟದ ಸಂಯೋಜಕ ಡಾ. ಕೆ.ನಸೀಮಾ ವಂದಿಸಿದರು. ಪ್ರಾಚಾರ್ಯ ಡಾ. ಕೆ.ವಿ.ಮುರಳಿ ವರದಿ ಮಂಡಿಸಿದರು.
ಮೂರು ಅಂತಸ್ತಿನ ಕಟ್ಟಡವು 30 ತರಗತಿ ಕೊಠಡಿಗಳು ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಭಾಂಗಣ ಒಳಗೊಂಡಿರುತ್ತದೆ. ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ (ರೂಸಾ) ಕಾಲೇಜಿನ ಹಳೆ ಕಟ್ಟಡ ದುರಸ್ಥಿ-ನವೀಕರಣಕ್ಕೆ 2 ಕೋಟಿ ರೂ. ಮತ್ತು ಬೋಧನಾ ಸಾಮಗ್ರಿಗಳ ಖರೀದಿಗೆ 60 ಲಕ್ಷ ರೂ. ಮೀಸಲಿಡಲಾಗಿದೆ.