ನವದೆಹಲಿ: ದೇಶದ ಅತಿ ದೊಡ್ಡ ಪಕ್ಷ ಗೂಂಡಾಗಿರಿ ನಡೆಸಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ಅಂತಹ ಸನ್ನಿವೇಶದಲ್ಲಿ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ,
'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಕುರಿತು ಕೇಜ್ರಿವಾಲ್ ನಿವಾಸದ ಮೇಲೆ ಬಿಜೆಪಿಯ ಯುವ ಘಟಕದ ಸದಸ್ಯರು ನಿನ್ನೆ ದಾಳಿ ನಡೆಸಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ಅರವಿಂದ್ ಕೇಜ್ರಿವಾಲ್ ಮುಖ್ಯವಲ್ಲ. ಆದರೆ, ದೇಶ ಮುಖ್ಯ. ನಾನು ರಾಷ್ಟ್ರಕ್ಕಾಗಿ ನನ್ನ ಪ್ರಾಣವನ್ನೇ ನೀಡಬಲ್ಲೆ. ಇಂತಹ ಗೂಂಡಾಗಿರಿಯಿಂದ ಭಾರತ ಪ್ರಗತಿ ಸಾಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಅತಿದೊಡ್ಡ ಪಕ್ಷವು ಇಂತಹ ಗೂಂಡಾಗಿರಿಯನ್ನು ಅನುಸರಿಸಿದರೆ, ಅದು ಜನರಲ್ಲಿ ಕೆಟ್ಟ ಸಂದೇಶವನ್ನು ರವಾನಿಸುತ್ತದೆ, ಇದೇ ಸರಿಯಾದ ಮಾರ್ಗವೆಂದು (ಯಾವುದನ್ನೂ ಎದುರಿಸಲು) ಜನರು ಭಾವಿಸುತ್ತಾರೆಂದು ತಿಳಿಸಿದ್ದಾರೆ.
ದಾಳಿ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
ಚುನಾವಣೆಯಲ್ಲಿ ಬಿಜೆಪಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಲು ಸಾಧ್ಯವಾಗದ ಕಾರಣ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.
ಈ ನಡುವೆ ಬಿಜೆಪಿ ಆಮ್ ಆದ್ಮಿ ಪಕ್ಷದ ವಿರುದ್ಧ ಕಿಡಿಕಾರಿದ್ದು, ಕೇಜ್ರಿವಾಲ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಲು ಆರಂಭಿಸುತ್ತಿದ್ದಂತೆ ಆಪ್ ನಾಟಕವನ್ನು ಸೃಷ್ಟಿಸಿದೆ ಎಂದು ಹೇಳಿದೆ.
ಈ ಮಧ್ಯೆ ದಾಳಿ ಪ್ರಕರಣ ಸಂಬಂಧ ದೆಹಲಿ ಪೊಲೀಸರು 8 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆಗೊಳಪಡಿಸಿದೆ ಎಂದು ತಿಳಿದುಬಂದಿದೆ.