ಮುಳ್ಳೇರಿಯ: ನಿರುದ್ಯೋಗ ನಿವಾರಣೆಗೆ ವಿನೂತನ ಯೋಜನೆಗಳೊಂದಿಗೆ ಕಾರಡ್ಕ ಬ್ಲಾಕ್ ಪಂಚಾಯತ್ ಬಜೆಟ್ ನಿನ್ನೆ ಮಂಡನೆಗೊಂಡಿದೆ. ಸರ್ಕಾರಿ ಸ್ವಾಧೀನದ ಘಟಕಗಳನ್ನು ಬಳಸಿಕೊಂಡು ಸ್ವ ಉದ್ಯೋಗ ಉದ್ಯಮಗಳನ್ನು ಜಾರಿಗೊಳಿಸಲಾಗುವುದು. ಈ ಯೋಜನೆಯು ಕೃಷಿ, ಹೈನುಗಾರಿಕೆ, ಎಸ್‍ಸಿ/ಎಸ್‍ಟಿ ಕಲ್ಯಾಣ, ಕೈಗಾರಿಕೆ ಮತ್ತು ಸಮಾಜ ಕಲ್ಯಾಣವನ್ನು ಸಂಯೋಜಿಸುವ ಸ್ವಸಹಾಯ ಗುಂಪುಗಳು ಮತ್ತು ಕುಟುಂಬಶ್ರೀ ಮೂಲಕ ಕೃಷಿ-ಕೈಗಾರಿಕಾ ಉದ್ಯಮಗಳನ್ನು ಪ್ರಾರಂಭಿಸುವ ಲಕ್ಷ್ಯ ಹೊಂದಿದೆ. ಹಿಂದುಳಿದ ವರ್ಗಗಳ ಬೆಳವಣಿಗೆಗೆ ಸಮಗ್ರ ಮಾಹಿತಿ ಸಂಗ್ರಹಣೆ ಮಾಡಲಾಗುವುದು. ಅರ್ಹರಿಗೆ ಸವಲತ್ತುಗಳನ್ನು ಪಡೆಯಲು ಇದು ನೆರವಾಗಲಿದೆ. ಮುಳಿಯಾರ್ ಸಿಎಚ್‍ಸಿಗೆ ಮಳೆನೀರು ಜಲಾಶಯ, ಬೇಡಗÀಂ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಯೋಜನೆ, ಬ್ಲಾಕ್‍ನಲ್ಲಿ ವಿರಾಮ ಕೇಂದ್ರ, ಕಾರಡ್ಕ ಸಾರ್ವಜನಿಕ ಸ್ಮಶಾನ, ಪೊವ್ವಲ್ ಕೆರೆ ನವೀಕರಣ, ಬಾಲಕಿಲ-ಪಾಂಚಾಲ ರಸ್ತೆ, ಜಯಪುರ ಸಮುದಾಯ ಭವನ-ಕೊಲ್ಲಂಪಣ ರಸ್ತೆ, ಪಟ್ಟಲಿಮುಲಾ ಚಿಕಂದಮೂಲ ರಸ್ತೆ ನಿರ್ಮಾಣ ಮೊದಲಾದವು ನಡೆಯಲಿದೆ.
ಒಟ್ಟು ಬಜೆಟ್ 53.75 ಕೋಟಿ ರೂ. ಮೀಸಲಿಡಲಾಗಿದೆ.
ಕಾರಡ್ಕದ ಕರ್ಮಂತೋಡಿಯಲ್ಲಿರುವ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ಹಣಕಾಸು ಸ್ಥಾಯಿ ಸಮಿತಿ ಸದಸ್ಯ ಎಂ ಕುಂಞಂಬು ನಂಬಿಯಾರ್ ಬಜೆಟ್ ಮಂಡಿಸಿದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣ, ದೇಲಂಪಾಡಿ ಪಂಚಾಯಿತಿ ಅಧ್ಯಕ್ಷೆ ಎ.ಪಿ.ಉಷಾ, ಬೇಡಡ್ಕ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಬ್ಲಾಕ್ ಸದಸ್ಯೆ ಎನ್.ಯಶೋದ, ಜಂಟಿ ಬಿಡಿಒ ಬಿ.ಶಾಜಿ, ಎನ್.ಎ.ಮಜೀದ್ ಮಾತನಾಡಿದರು. ಬಿಡಿಒ ಕೆ.ಶೀಬಾ ಸ್ವಾಗತಿಸಿದರು.