ನವದೆಹಲಿ: ಛತ್ರಸಾಲ್ ಸ್ಟೇಡಿಯಂ ಗಲಾಟೆ ಪ್ರಕರಣದಲ್ಲಿ ತಿಹಾರ್ ಜೈಲು ಪಾಲಾಗಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರು ಶೀಘ್ರದಲ್ಲೇ ತಮ್ಮ ಸಹ ಕೈದಿಗಳಿಗೆ ಕುಸ್ತಿ ಮತ್ತು ದೈಹಿಕ ಸದೃಡತೆ ಕುರಿತು ತರಬೇತಿ ನೀಡಲಿದ್ದಾರೆ ಎಂದು ಜೈಲು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಾದ್ಯಂತ ಮತ್ತು ಜೈಲು ಆವರಣದೊಳಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ತಿಹಾರ್ ಜೈಲಿನ ಆಡಳಿತವು ಈ ಹಿಂದೆ ಸುಶೀಲ್ ಕುಮಾರ್ ಅವರನ್ನು ಜೈಲಿನ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯೋಜಿಸಿದ್ದರು. ಆದರೆ ದೆಹಲಿಯಲ್ಲಿ ಕೋವಿಡ್ ಮೂರನೇ ಅಲೆಯ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳನ್ನು ನಿಲ್ಲಿಸಬೇಕಾಯಿತು ಎಂದಿದ್ದಾರೆ.
"ನಾವು ಇದನ್ನು ಮೊದಲೇ ಅನುಮತಿಸಲು ನಿರ್ಧರಿಸಿದ್ದೇವೆ. ಆದರೆ ಕೋವಿಡ್‌ನ ಮೂರನೇ ಅಲೆಯ ದೃಷ್ಟಿಯಿಂದ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಈಗ, ಪರಿಸ್ಥಿತಿಯ ಸಹಜ ಸ್ಥಿತಿಗೆ ಬಂದಿದ್ದು, ಜೈಲುಗಳಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಪುನಃಸ್ಥಾಪಿಸಲಾಗುತ್ತಿದೆ. ಆದ್ದರಿಂದ, ನಾವು ಸುಶೀಲ್ ಕುಮಾರ್ ಅವರಿಗೆ ತರಬೇತಿ ನೀಡಲು ಅವಕಾಶ ನೀಡುತ್ತೇವೆ. ಆಸಕ್ತಿ ಇರುವ ಇತರ ಕೈದಿಗಳಿಗೆ ಕುಸ್ತಿ ಮತ್ತು ದೈಹಿಕ ಫಿಟ್ನೆಸ್ ಬಗ್ಗೆ ತರಬೇತಿ ನೀಡಲಿದ್ದಾರೆ'' ಎಂದು ಡೈರೆಕ್ಟರ್ ಜನರಲ್ (ದೆಹಲಿ ಕಾರಾಗೃಹ) ಸಂದೀಪ್ ಗೋಯೆಲ್ ಅವರು ಪಿಟಿಐಗೆ ತಿಳಿಸಿದ್ದಾರೆ.