ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್‌ಒ) ಬಡ್ಡಿ ದರ ಕಡಿತದ ಕುರಿತು ಸಿಪಿಐ(ಎಂ) ಶನಿವಾರ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ದುಡಿಯುವ ವರ್ಗದ ಮೇಲೆ ಸರ್ಕಾರ ಮತ್ತಷ್ಟು 'ದಾಳಿ' ನಡೆಸಿದೆ ಎಂದು ಸಿಪಿಐ(ಎಂ) ಆಕ್ರೋಶ ವ್ಯಕ್ತಪಡಿಸಿದೆ.
ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ ಮೋದಿ ಸರ್ಕಾರವು ದುಡಿಯುವ ಜನರ ಮೇಲೆ ಸೇಡು ತೀರಿಸಿಕೊಳ್ಳುವ ಮೂಲಕ ಮತ್ತಷ್ಟು ದಾಳಿ ನಡೆಸಿದೆ. ಉದ್ಯೋಗ ನಷ್ಟ, ಬೆಲೆ ಏರಿಕೆಯಂತಹ ಸಂಕಷ್ಟಗಳ ಬೆನ್ನಲ್ಲೇ ಎದುರಾಗಿರುವ ಈ ದಾಳಿಯನ್ನು ನಮ್ಮೆಲ್ಲ ಶಕ್ತಿಯಿಂದ ಎದುರಿಸಬೇಕಾಗಿದೆ' ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಗೋವಾದಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿಯು ಸರ್ಕಾರ ರಚಿಸಲಿದೆ. ಪಂಜಾಬ್‌ನಲ್ಲಿ ಎಎಪಿ ಗೆದ್ದಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2021-22ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿದರವನ್ನು ಶೇ 8.5ರಿಂದ ಶೇ 8.1ಕ್ಕೆ ಇಳಿಸಿದೆ.
ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕನಿಷ್ಠ ದರ ಇದಾಗಿದೆ. 1977-78ರಲ್ಲಿ ಶೇ 8ರಷ್ಟಾಗಿತ್ತು. ಐದು ಕೋಟಿ ಚಂದಾದಾರರಿಗೆ ಇದು ಅನ್ವಯವಾಗಲಿದೆ. 2020-21ನೇ ಸಾಲಿನಲ್ಲಿ ಬಡ್ಡಿ ದರ ಶೇ 8.5 ಆಗಿತ್ತು.
ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ (ಸಿಬಿಟಿ) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗ ಅನುಮೋದನೆಗಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ.