ಪುಣೆ: 'ಮೆಟ್ರೊ ರೈಲು ಸಂಪರ್ಕ ಸೇರಿದಂತೆ ಸಮೂಹ ಸಾರಿಗೆಯನ್ನು ಸುಧಾರಿಸುವತ್ತ ಕೇಂದ್ರ ಸರ್ಕಾರವು ಗಮನಹರಿಸುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ
ಮಹಾರಾಷ್ಟ್ರದ ಪುಣೆ ನಗರದಲ್ಲಿ ಭಾನುವಾರ ಮೆಟ್ರೊ ರೈಲು ಯೋಜನೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಇಲ್ಲಿನ ಎಂಐಟಿ ಕಾಲೇಜು ಮೈದಾನದಲ್ಲಿ ಮಾತನಾಡಿದ ಅವರು, 'ಪುಣೆ ಮೆಟ್ರೊದ ಶಂಕುಸ್ಥಾಪನೆಗೂ ನನಗೆ ಅವಕಾಶ ಸಿಕ್ಕಿತ್ತು.
'ಹಿಂದಿನ ಸರ್ಕಾರಗಳಿದ್ದಾಗ ಯೋಜನೆಗಳ ಶಂಕುಸ್ಥಾಪನೆ ನಡೆಯುತ್ತಿತ್ತು. ಆದರೆ, ಆ ಯೋಜನೆಗಳ ಉದ್ಘಾಟನೆ ಯಾವಾಗ ಎಂಬುದು ತಿಳಿಯುತ್ತಿರಲಿಲ್ಲ' ಎಂದು ಅವರು ವ್ಯಂಗ್ಯವಾಗಿ ನುಡಿದರು.
'ಪುಣೆ ಮೆಟ್ರೊ ರೈಲು ಯೋಜನೆಯ ಉದ್ಘಾಟನೆಯು ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬಹುದು ಎಂಬ ಸಂದೇಶವನ್ನು ನೀಡಿದೆ' ಎಂದರು.
'ನಗರೀಕರಣವು ತ್ವರಿತಗತಿಯಲ್ಲಿ ನಡೆಯುತ್ತಿದೆ. 2030ರ ವೇಳೆಗೆ ದೇಶದ ನಗರ ಜನಸಂಖ್ಯೆಯು 60 ಕೋಟಿ ಗಡಿ ದಾಟಲಿದೆ. ಹೆಚ್ಚುತ್ತಿರುವ ಜನಸಂಖ್ಯೆಯು ಬಹಳಷ್ಟು ಅವಕಾಶಗಳನ್ನು ತರುತ್ತದೆ. ಆದರೆ ಅದೇ ಸಮಯದಲ್ಲಿ ಸವಾಲುಗಳೂ ಎದುರಾಗುತ್ತವೆ. ನಗರಗಳಲ್ಲಿ ಫ್ಲೈಓವರ್‌ಗಳನ್ನು ನಿರ್ದಿಷ್ಟ ಮಿತಿಯವರೆಗೆ ಮಾಡಬಹುದು. ಇಂಥ ಸಂದರ್ಭಗಳಲ್ಲಿ ನಮಗೆ ಸಮೂಹ ಸಾರಿಗೆ ವ್ಯವಸ್ಥೆಯೊಂದೇ ಆಯ್ಕೆಯಾಗುತ್ತದೆ. ಮೆಟ್ರೊ ರೈಲು ಸೇರಿದಂತೆ ಇತರ ಸಮೂಹ ಸಾರಿಗೆ ಸುಧಾರಣೆಯತ್ತ ನಮ್ಮ ಸರ್ಕಾರವು ಗಮನ ಹರಿಸುತ್ತಿದೆ' ಎಂದರು.
ಮೆಟ್ರೊ ರೈಲು ಉದ್ಘಾಟನೆ ವೇಳೆ ಕಿಯೋಸ್ಕ್‌ನಿಂದ ಟಿಕೆಟ್ ಖರೀದಿಸಿದ ನಂತರ ರೈಲಿನಲ್ಲಿ 10 ನಿಮಿಷಗಳ ಪ್ರಯಾಣಿಸಿದ ಮೋದಿ ಅವರು ಅಂಗವಿಕಲ ಮಕ್ಕಳೊಂದಿಗೆ ಮಾತುಕತೆ ನಡೆಸಿದರು.
ಪುಣೆ ಮೆಟ್ರೊ ರೈಲು ಯೋಜನೆಯ ಒಟ್ಟು ವೆಚ್ಚ ₹ 11,400 ಕೋಟಿ. ಈ ಯೋಜನೆಗೆ ಪ್ರಧಾನಿ ಮೋದಿ 2016ರ ಡಿ. 24ರಂದು ಅಡಿಗಲ್ಲು ಹಾಕಿದ್ದರು. ಒಟ್ಟು 32.2 ಕಿ.ಮೀ ಉದ್ದದ ಮೆಟ್ರೊ ರೈಲು ಯೋಜನೆಯಲ್ಲಿ 12 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ಚಾಲನೆ ನೀಡಿದರು.