ಚುನಾವಣೆ ಸಂದರ್ಭ ನೀಡುವ ಭಾಷಣಗಳು ಇತರ ಸಂದರ್ಭಗಳಲ್ಲಿ ನೀಡಲಾಗುವ ಭಾಷಣಗಳಿಗಿಂತ ಭಿನ್ನವಾಗಿದೆ ಹಾಗೂ ಉದ್ದೇಶವಿಲ್ಲದೇ ಇದ್ದರೂ ಕೆಲವೊಮ್ಮೆ ಅವುಗಳನ್ನು ಮಹೌಲ್ (ವಾತಾವರಣ) ನಿರ್ಮಿಸಲು ಹೇಳಲಾಗುತ್ತದೆ, ಎಂದು ಈಶಾನ್ಯ ದಿಲ್ಲಿ ಹಿಂಸಾಚಾರಗಳಿಗೆ ಸಂಬಂಧಿಸಿದ ದ್ವೇಷದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಶುಕ್ರವಾರ ದಿಲ್ಲಿ ಹೈಕೋರ್ಟ್ ಹೇಳಿದೆ ಎಂದು indianexpress.com ವರದಿ ಮಾಡಿದೆ.
"ಏನನ್ನಾದರೂ ನಗುವಿನೊಂದಿಗೆ ಹೇಳಿದರೆ ಅಲ್ಲಿ ಅಪರಾಧವಿರುವುದಿಲ್ಲ, ಆದರೆ ಏನನ್ನಾದರೂ ನಿಂದನಾತ್ಮಕವಾಗಿ ಹೇಳಿದ್ದರೆ ಅಲ್ಲಿ ಅಪರಾಧದ ಉದ್ದೇಶವಿರಬಹುದು,'' ಎಂದು ವಿಚಾರಣೆ ವೇಳೆ ಜಸ್ಟಿಸ್ ಚಂದ್ರ ಧಾರಿ ಸಿಂಗ್ ಹೇಳಿದರು.
ಕೇಂದ್ರ ಸಚಿವ ಅನುರಾಗ್ ಠಾಕುರ್ ಮತ್ತು ಸಂಸದ ಪರ್ವೇಶ್ ವರ್ಮ ಅವರು ನೀಡಿದ್ದರೆನ್ನಲಾದ ದ್ವೇಷದ ಭಾಷಣ ಸಂಬಂಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೆಳಗಿನ ಹಂತದ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು.
"ಅದು ಚುನಾವಣಾ ಭಾಷಣವಾಗಿತ್ತೇ ಅಥವಾ ಇತರ ಸಮಯ ನೀಡಲಾದ ಭಾಷಣವೇ? ಚುನಾವಣೆ ಸಂದರ್ಭ ಯಾವುದಾದರೂ ಭಾಷಣ ನೀಡಲಾಗಿದ್ದರೆ ಅದು ಬೇರೆ ವಿಚಾರ. ಸಾಮಾನ್ಯ ಸಂದರ್ಭಗಳಲ್ಲಿ ಭಾಷಣ ನೀಡುತ್ತಿದ್ದರೆ ಅದು ಏನನ್ನೋ ಪ್ರಚೋದಿಸಿದಂತೆ,'' ಎಂದು ನ್ಯಾಯಾಲಯ ಹೇಳಿದೆ
"ನಾವು ಕೂಡ ಪ್ರಜಾಪ್ರಭುತ್ವವಾಗಿರುವುದರಿಂದ ನೀವು ಕೂಡ ವಾಕ್‍ಸ್ವಾತಂತ್ರ್ಯ ಹೊಂದಿದ್ದೀರಿ,'' ಎಂದು ಹೇಳಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.