ಪಣಜಿ: ಗೋವಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಪ್ರಮೋದ್ ಸಾವಂತ್ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದು, ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇಂದು ಸಂಜೆ ಪಣಜಿಯಲ್ಲಿ ನಡೆದ ನೂತನ ಬಿಜೆಪಿ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಸಾವಂತ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಬಿಜೆಪಿ ಕೇಂದ್ರ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್ ಮುರುಗನ್, ವಿಧಾನಸಭಾ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವಿಸ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸದಾನಂದ ಶೇಟ್ ತಾನವಡೆ ಅವರು ಭಾಗವಹಿಸಿದ್ದರು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸಾವಂತ್ ಅವರ ಹೆಸರನ್ನು ಶಾಸಕ ವಿಶ್ವಜಿತ್ ರಾಣೆ ಪ್ರಸ್ತಾಪಿಸಿದರು ಮತ್ತು ಅವರ ಪ್ರಸ್ತಾಪವನ್ನು ಮೌವಿನ್ ಗೊಡಿನ್ಹೋ ಮತ್ತು ರೋಹನ್ ಖೌಂಟೆ ಸೇರಿದಂತೆ ಇತರ ಶಾಸಕರು ಅನುಮೋದಿಸಿದರು ಎಂದು ಸಭೆಯ ನಂತರ ತೋಮರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.