ತಿರುವನಂತಪುರ: ಮನೆಯಲ್ಲಿ ಮಲಗಿದ್ದ ಕುಟುಂಬದ ಐವರು ಬೆಂಕಿಗೆ ಆಹುತಿಯಾದ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರ್ಕಳದಲ್ಲಿರುವ ಪ್ರತಾಪ್ ಅವರ ಎರಡು ಅಂತಸ್ತಿನ ಮನೆಗೆ ನಿನ್ನೆ ಬೆಳಗ್ಗೆ ಬೆಂಕಿ ಹತ್ತಿ ಐವರು ಮೃತರಾಗಿದ್ದರು. ಅಪಘಾತದಲ್ಲಿ ಹಿರಿಯ ಮಗ ನಿಹುಲ್ ಮಾತ್ರ ಬದುಕುಳಿದಿದ್ದಾನೆ. ಅಗ್ನಿಶಾಮಕ ದಳದವರು ಸಾಹಸದಿಂದ ಮನೆ ಆವರಣ ಪ್ರವೇಶಿಸಿದಾಗ ಮೊದಲು ಮೆಟ್ಟಿಲುಗಳ ಮೇಲೆ ದೇಹದಾದ್ಯಂತ ಸುಟ್ಟಗಾಯಗಳಿಂದ ಬಳಲುತ್ತಿದ್ದ ನಿಹುಲ್‌ನನ್ನು ನೋಡಿದರು. ತನ್ನ ಪತ್ನಿ, ಪುತ್ರ, ತಂದೆ, ತಾಯಿ ಹಾಗೂ ಸಹೋದರ ಮಹಡಿಯಲ್ಲಿದ್ದು ಹೇಗಾದರೂ ಮಾಡಿ ಅವರೆಲ್ಲರನ್ನೂ ಉಳಿಸುವಂತೆ ಗೋಗರೆದಿದ್ದ.
ಪ್ರತಾಪ್ ಅವರ ಮನೆಯ ಎದುರು ವಾಸವಾಗಿರುವ ಶಶಾಂಕ ಎಂಬಾತ ಬೆಂಕಿಯನ್ನು ಮೊದಲು ಗಮನಿಸಿದರು. ಮನೆಯ ಬಲಬದಿಯ ಕಾರ್ಪೋರ್ಟಿನಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಕಂಡು ಶಶಾಂಕ ಬೊಬ್ಬಿರಿಯಲು ಪ್ರಾರಂಭಿಸಿದರು. ಬಳಿಕ ಶಶಾಂಕ್ ಅವರ ಪುತ್ರಿ ಅಲೀನಾ ನಿಹುಲ್ ಅವರಿಗೆ ಮೊಬ್ಯೆಲ್ ಕರೆಮಾಡಿದರು. ನಿಹುಲ್ ಎರಡನೇ ಬಾರಿ ಕರೆ ಮಾಡಿದಾಗ ಫೋನ್ ಸ್ವೀಕರಿಸಿದರು ಎಂದು ಅಲೀನಾ ಹೇಳುತ್ತಾರೆ. ಬೆಂಕಿ ಎಲ್ಲಿದೆ ಎಂದು ನಿಹುಲ್ ಕೇಳಿದ. ಮನೆ ಮುಂದೆಯೇ ಇದೆ ಎಂದರು. ತಕ್ಷಣ ಫೋನ್ ವಿಚ್ಚೇಧನಗೊಂಡಿತು ಮತ್ತು ನಂತರ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಅಲೀನಾ ಹೇಳುತ್ತಾರೆ.
ಏನಾಯಿತು ಎಂದು ತಿಳಿಯಲು ನಿಹುಲ್ ಕೆಳಗೆ ಓಡಿ ಹೋಗಿರಬಹುದು ಎಂಬ ಅಂದಾಜಿಸಿದೆವು. ನಿಹುಲ್ ತೀವ್ರ ಸುಟ್ಟಗಾಯಗಳ ಅಪಾಯದಿಂದ ಆಸ್ಪತ್ರೆಯಲ್ಲಿದ್ದು, ಅವರು ಚೇತರಿಸಿದ ಬಳಿಕವಷ್ಟೇ ಇನ್ನಷ್ಟು ಮಾಹಿತಿಗಳು ಲಭ್ಯವಾಗಲಿದೆ. ಕೆಳ ಹಾಲ್ ಬಳಿ ಪ್ರತಾಪ್ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತು ಮಲಗುವ ಕೋಣೆಯಲ್ಲಿ ಅವರ ಪತ್ನಿ ಶೆರ್ಲಿ ಪತ್ತೆಯಾದರು. ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಅಡುಗೆ ಕೋಣೆಗೆ ಬೆಂಕಿ ಹರಡಿದಂತಿಲಲ್ಲ. ನಿಹುಲ್ ಸಹೋದರ ಅಹಿಲ್ ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪಕ್ಕದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಘಟನೆಯಲ್ಲಿ ಬೇರೆ ಯಾವುದೇ ಶಂಕೆ ಇಲ್ಲ ಎಂಬುದು ಪೊಲೀಸರ ಪ್ರಾಥಮಿಕ ತೀರ್ಮಾನ. ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬಳಿಕ ಪೊಲೀಸರು ಈ ವಿಷಯ ತಿಳಿಸಿದ್ದಾರೆ. ಮನೆಯ ಹೊರಗೆ ಅಥವಾ ಸಮೀಪದಲ್ಲಿ ಅಸಹಜವಾದ ಏನೂ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಠಡಿಗಳಲ್ಲಿ ಎಸಿ ಚಾಲನೆಯಲ್ಲಿತ್ತು. ಗೇಟ್ ಮತ್ತು ಬಾಗಿಲಿಗೆ ದೊಡ್ಡ ಬೀಗಗಳಿಂದ ಲಾಕ್ ಮಾಡಲಾಗಿತ್ತು. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯೂ ಮನೆಯೊಳಗೆ ಬರಲು ಪರದಾಡಿದರು.