ಕ್ಯಾಲಿಕಟ್: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಕೇರಳದ ಫೈಝಲ್ ಇ ಕೊಟ್ಟಿಕೊಲನ್ ನೇತೃತ್ವದ ಯುಎಇ ಮೂಲದ ಕೆಇಎಫ್ ಹೋಲ್ಡಿಂಗ್ಸ್ ಸಂಸ್ಥೆಯು ಕ್ಯಾಲಿಕಟ್ ಸಮೀಪ 800 ಕೋಟಿ ರೂ.ಗಳ ವೆಲ್ ನೆಸ್ ರೆಸಾರ್ಟ್ ಸ್ಥಾಪಿಸಲಿದೆ.
ರೆಸಾರ್ಟ್ ಕಾಮಗಾರಿಯ ಎರಡನೇ ಹಂತದ ಶಂಕುಸ್ಥಾಪನೆಯನ್ನು ಮಾರ್ಚ್ 27 ರಂದು ಕೇರಳ ಪ್ರವಾಸೋದ್ಯಮ ಸಚಿವ ಪಿ.ಎ. ಮುಹಮ್ಮದ್ ರಿಯಾಸ್ ಮತ್ತು ಭಾರತದಲ್ಲಿನ ಯುಎಇ ರಾಯಭಾರಿ ಡಾ. ಅಹ್ಮದ್ ಅಬ್ದುಲ್ ರಹಮಾನ್ ಅಲ್ಬನ್ನಾ ಅವರು ಜಂಟಿಯಾಗಿ ನೆರವೇರಿಸಲಿದ್ದಾರೆ.
ಮುಖ್ಯವಾಗಿ ಯುರೋಪ್ ಮತ್ತು ಗಲ್ಫ್ ದೇಶಗಳ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಕೆಇಎಫ್ ಹೋಲ್ಡಿಂಗ್ಸ್ ಈ ವೈದ್ಯಕೀಯ ಪ್ರವಾಸೋದ್ಯಮವನ್ನು ಸ್ಥಾಪಿಸುತ್ತಿದೆ. ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಮಲಪ್ಪುರಂ ಜಿಲ್ಲೆಯ ಚೆಲೆಂಬ್ರಾದಲ್ಲಿರುವ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. 2023 ರ ಮಾರ್ಚ್ 12 ರಂದು ಇದನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಮತ್ತು 2024 ರ ವೇಳೆಗೆ ಯೋಜನೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೆಇಎಫ್ ಮೂಲಗಳು ತಿಳಿಸಿದೆ.
ಆರೋಗ್ಯ ಸುರಕ್ಷತೆ ಜೊತೆಗೆ ಜನರನ್ನು ಸಂತೋಷದೆಡೆಗೆ ಕೊಂಡೊಯ್ಯುವುದೇ ನಮ್ಮ ಗುರಿ ಎಂದು ಫೈಝಲ್ ಹೇಳಿದ್ದಾರೆ.
ಪ್ರಶಾಂತ ವಾತಾವರಣದಲ್ಲಿ ಶೀಘ್ರ ಚಿಕಿತ್ಸೆ ನೀಡಲಾಗುವುದು. ಈ ಆರೋಗ್ಯ ಕೇಂದ್ರವು ಯೋಗ, ಧ್ಯಾನ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ರೆಸಾರ್ಟ್‌ನ ವಿನ್ಯಾಸವು ಗಾಳಿ, ನೀರು, ಆಹಾರ ಮತ್ತು ಸೂರ್ಯ ಎಂಬ ನಾಲ್ಕು ಅಂಶಗಳನ್ನು ಆಧರಿಸಿದೆ. ಇಂಟಿಗ್ರೇಟೆಡ್ ಕ್ಲಿನಿಕಲ್ ವೆಲ್ನೆಸ್ ರೆಸಾರ್ಟ್ ಈ ರೀತಿಯ ಉದ್ಯಮದಲ್ಲಿ ಮೊದಲನೆಯದು ಎಂದು ಹೇಳಲಾಗುತ್ತದೆ. ವಿವಿಧ ವೈದ್ಯಕೀಯ ತಜ್ಞರ ಜೊತೆಗೆ, ಪುಣೆಯ ವೇದಾಂತ ಅಕಾಡೆಮಿಯ ಸಹಯೋಗವನ್ನೂ ರೆಸಾರ್ಟ್ ಹೊಂದಿರುತ್ತದೆ.
ಆರೋಗ್ಯ ಕೇಂದ್ರ ಮತ್ತು ವೆಲ್‌ನೆಸ್ ಕೇಂದ್ರ ಪ್ರತ್ಯೇಕವಾಗಿ ಇರುತ್ತದೆ. 30 ಎಕರೆ ವಿಸ್ತೀರ್ಣದ ರೆಸಾರ್ಟ್‌ನಲ್ಲಿ ಒಟ್ಟು 130 ಕೊಠಡಿಗಳು ಇರಲಿವೆ. 44,000 ಚದರ ಅಡಿ ವಿಸ್ತೀರ್ಣದ ಈಜುಕೊಳವನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಕೆ ಇ ಎಫ್ ಹೋಲ್ಡಿಂಗ್ಸ್ ನ ನಿರ್ದೇಶಕಿ ಶಬನಾ ಫೈಝಲ್ ತಿಳಿಸಿದ್ದಾರೆ. ಶಬನಾ ಮಂಗಳೂರಿನ ತುಂಬೆಯ ಖ್ಯಾತ ಉದ್ಯಮಿ, ಸಾಮಾಜಿಕ ಧುರೀಣ ದಿವಂಗತ ಬಿ ಅಹ್ಮದ್ ಹಾಜಿ ಮೊಹಿಯುದ್ದೀನ್ ಅವರು ಸುಪುತ್ರಿ.
ವಿವಿಧ ದೇಶಗಳ ರುಚಿಗಳ ಕೇರಳದಲ್ಲೇ ಅತಿದೊಡ್ಡ ಬಹು-ತಿನಿಸು ರೆಸ್ಟೋರೆಂಟ್ ಅನ್ನು ಕೂಡಾ ಇಲ್ಲಿ ಸ್ಥಾಪಿಸಲಾಗುತ್ತಿದೆ. ಸದ್ಯ ಅದರ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಂಡಿದೆ.
ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ನವೀನ ಬದಲಾವಣೆಗಳನ್ನು ಮಾಡಲು ಹೆಸರುವಾಸಿಯಾಗಿರುವ ಕೆಇಎಫ್ ಹೋಲ್ಡಿಂಗ್ಸ್ ಆಧುನಿಕ ತಂತ್ರಜ್ಞಾನಗಳನ್ನು ರೆಸಾರ್ಟ್‌ಗೆ ತರಲಿದೆ.
ಇಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರುವುದಿಲ್ಲ. ಬದಲಾಗಿ, ವಿಕಿರಣ ತಂಪಾಗಿಸುವಿಕೆಯ ಮೂಲಕ ಕಟ್ಟಡಗಳ ಒಳಗಿನ ತಾಪಮಾನವನ್ನು ನಿಯಂತ್ರಿಸುವಂತೆ ಮಾಡಲಾಗುತ್ತದೆ. ಗೋಡೆಗಳು ಮತ್ತು ಮಹಡಿಗಳಲ್ಲಿ ನಿರ್ಮಿಸಲಾದ ಇಪಿಎಸ್ ಪ್ಯಾನಲ್ ಗಳ ಮೂಲಕ ತಂಪಾಗಿಸುವ ಕೊಳವೆಗಳನ್ನು ಅಳವಡಿಸಲಾಗುತ್ತದೆ.
ಸಂಪೂರ್ಣವಾಗಿ ಸೌರಶಕ್ತಿಯಿಂದ ಚಾಲಿತವಾಗಲಿರುವ ಈ ರೆಸಾರ್ಟ್, ಮಳೆನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ.