ನವದೆಹಲಿ: ದೆಹಲಿಯಿಂದ ದೋಹಾಗೆ ತೆರಳುತ್ತಿದ್ದ ಕತಾರ್ ಏರ್‌ವೇಸ್ ವಿಮಾನ ಪಾಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ವಿಮಾನ ಹಾರಾಟದ ಸಮಯದಲ್ಲಿ ಇದ್ದಕ್ಕಿದ್ದಂತೆ ವಿಮಾನದಿಂದ ಹೊಗೆ ಬರಲಾರಂಭಿಸಿತು. ಬಳಿಕ ವಿಮಾನವನ್ನು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. 100 ಪ್ರಯಾಣಿಕರಿದ್ದ ಈ ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಮೂಲಕ ಎಲ್ಲ ಪ್ರಯಾಣಿಕರ ಪ್ರಾಣವನ್ನು ರಕ್ಷಣೆ ಮಾಡಲಾಗಿದೆ.
ಕತಾರ್ ಏರ್‌ವೇಸ್‌ನ QR579 ವಿಮಾನವು ದೆಹಲಿಯಿಂದ ದೋಹಾಗೆ ಟೇಕ್ ಆಫ್ ಆಗಿತ್ತು. ಈ ವೇಳೆ ವಿಮಾನದ ಕಾರ್ಗೋ ಹೋಲ್ಡ್‌ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲಾರಂಭಿಸಿತು. ಇದಾದ ನಂತರ ವಿಮಾನವನ್ನು ಪಾಕಿಸ್ತಾನಕ್ಕೆ ತಿರುಗಿಸಲಾಯಿತು. ಬಳಿಕ ಕರಾಚಿಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಕುರಿತು ಕತಾರ್ ಏರ್‌ವೇಸ್ ಪರವಾಗಿ ಹೇಳಿಕೆಯನ್ನು ನೀಡಲಾಗಿದ್ದು, ವಿಮಾನದಲ್ಲಿನ ಸಮಸ್ಯೆಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಪ್ರಯಾಣಿಕರನ್ನು ಮತ್ತೊಂದು ವಿಮಾನದ ಮೂಲಕ ದೋಹಾಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಏರ್‌ವೇಸ್ ಹೇಳಿದೆ. ಅಲ್ಲದೆ, ಪ್ರಯಾಣಿಕರಿಗೆ ಕತಾರ್ ಏರ್‌ವೇಸ್ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದೆ.