ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಮತ್ತು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸಹಯೋಗದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಕೇಂದ್ರಕ್ಕೆ ಕೇಂದ್ರ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ನಿನ್ನೆ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾರತ ವಿಶ್ವಗುರುವಾಗಲು ಇದೊಂದು ಮಹತ್ವದ ಹೆಜ್ಜೆ. ಮೈಸೂರು ವಿಶ್ವವಿದ್ಯಾಲಯ 3 ಎಕರೆ ಜಾಗ ನೀಡಿದ್ದು, ಈ ಕೇಂದ್ರದಲ್ಲಿ 81 ಕೋಟಿ ರೂ. ವೆಚ್ಚದಲ್ಲಿ ಪ್ಲಾನಿಟೋರಿಯಂನ್ನು ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಸ್ಥಾಪಿಸಲಿದೆ. ಯುವ ವಿಜ್ಞಾನಿಗಳು ಹೆಚ್ಚಾಗಿ ಬರಬೇಕಿದೆ. ಅದರಲ್ಲಿ ಯುವತಿಯರ ಸಂಖ್ಯೆಯೂ ಗಣನೀಯವಾಗಿರಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ ಸಿಂಹ, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಕೆ. ವಿಜಯ ರಾಘವನ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.