ಚೆಂಗನ್ನೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ.
ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಕೊಟ್ಟಾಯಂ ಮೂಲದ ದಿನಗೂಲಿ ನೌಕರ ಗೋಪಿಯ ಬಾಳಲ್ಲಿ ಶಿವರಾತ್ರಿಯ ಹಿಂದಿನ ದಿನವೇ ಲಾಟರಿ ರೂಪದಲ್ಲಿ ಅದೃಷ್ಟದ ಲಕ್ಷ್ಮೀ ಎಂಟ್ರಿ ಕೊಟ್ಟಿದ್ದಾಳೆ. ಗೋಪಿ ಖರೀದಿ ಮಾಡಿದ್ದ ಲಾಟರಿಗೆ ಬರೋಬ್ಬರಿ 75 ಲಕ್ಷ ರೂ. ಬಹುಮಾನ ಒಲಿದು ಬಂದಿದೆ.
ಗೋಪಿ, ಚಾಂಗನಸ್ಸೆರಿ ಪುರಸಭೆ ವ್ಯಾಪ್ತಿಯ ಥ್ರಿಕ್ಕೊಡಿಥನಂನ ಮೆಚೆರಿಥರಾ ಮೂಲದ ನಿವಾಸಿ. ಪ್ರತಿ ದಿನ ಕೂಲಿ ಮಾಡಿಕೊಂಡು ದಿನ ದೂಡುತ್ತಿದ್ದರು. ಕೂಲಿ ಮಾಡಿದರೆ ಊಟ ಇಲ್ಲದಿದ್ದರೆ ಉಪವಾಸ ಎಂಬ ಸ್ಥಿತಿಯಲ್ಲಿ ಗೋಪಿ ಕುಟುಂಬವಿದೆ. ಆದರೆ, ಇದೀಗ ಅವರು ಖರೀದಿಸಿದ್ದ WX 358520 ನಂಬರ್ನ ಲಾಟರಿಗೆ 75 ಲಕ್ಷ ರೂಪಾಯಿ ಬಹುಮಾನ ಬಂದಿದ್ದು, ಈ ಸರ್ಪ್ರೈಸ್ನಿಂದ ಗೋಪಿ ಇನ್ನು ಹೊರ ಬಂದಿಲ್ಲ.
ಅಂದಹಾಗೆ ಫೆ. 28ರಂದು ಲಾಟರಿ ಫಲಿತಾಂಶ ಪ್ರಕಟವಾಗಿದೆ. ಇತ್ತೀಚೆಗಷ್ಟೇ ಗೋಪಿ, ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಥ್ರಿಕ್ಕೊಡಿಥನಂ ಮ್ಯಾಜಿಕ್ ಲಕ್ಕಿ ಸೆಂಟರ್ನಲ್ಲಿ ಲಾಟರಿ ಖರೀದಿಸಿದ್ದರು. ಇದೀಗ ಶಿವರಾತ್ರಿಯ ಮುನ್ನಾ ದಿನವೇ ಗೋಪಿ ಬಾಳಲ್ಲಿ ಶಿವನ ಅನುಗ್ರಹವಾಗಿದ್ದು, ಅದೃಷ್ಟ ಲಕ್ಷಿ ಮನೆಯನ್ನು ಪ್ರವೇಶಿಸಿ, ಗೋಪಿ ಕಷ್ಟಗಳನೆಲ್ಲ ದೂರ ಮಾಡಿದ್ದಾಳೆ.
ಹತ್ತಿರದ ಬ್ಯಾಂಕ್ಗೆ ಲಾಟರಿಯನ್ನು ಸಲ್ಲಿಸಿ ಗೋಪಿ ಬಹುಮಾನದ ಹಣವನ್ನು ಪಡೆಯಲಿದ್ದಾರೆ. ನಿರೀಕ್ಷಿಸದ ರೀತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಬಂದಿದ್ದು, ಗೋಪಿ ಕುಟುಂಬ ತುಂಬಾ ಖುಷಿಯಾಗಿದೆ.