ವಿಜಯವಾಡ : ಮಹಿಳಾ ದಿನಕ್ಕೆ ಇನ್ನೇನು ಎರಡೇ ದಿನಗಳು ಬಾಕಿ ಇವೆ. ಮಹಿಳೆಯರ ಗುಣಗಾನ ಮಾಡಲು ಬಹುತೇಕರು ಸಿದ್ಧರಾಗಿ ನಿಂತಿದ್ದಾರೆ. ಆದರೆ ಈ ಸಲ ಮಹಿಳಾ ದಿನದ ಕೊಡುಗೆ ಎಂಬಂತೆ ಆಂಧ್ರಪ್ರದೇಶದ ಚಂದ್ರಗಿರಿಯ ರೈಲು ನಿಲ್ದಾಣ ಇದೀಗ ದೇಶದ ಗಮನ ಸೆಳೆದಿದೆ.
ಏಕೆಂದರೆ ಇದು 'ಮಹಿಳಾ ಚಾಲಿತ ರೈಲು ನಿಲ್ದಾಣ'ವಾಗಿದ್ದು, ಮಹಿಳಾ ಉದ್ಯೋಗಿಗಳೇ ಪ್ರತಿಯೊಂದು ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಖಾತ್ರಿಪಡಿಸಿಕೊಳ್ಳಲು ಭಾರತೀಯ ರೈಲ್ವೆಯು ಎಲ್ಲಾ ಮಹಿಳಾ ಉದ್ಯೋಗಿಗಳಿರುವ ರೈಲ್ವೆ ನಿಲ್ದಾಣಗಳ ಪರಿಕಲ್ಪನೆ ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ತೂರು ಜಿಲ್ಲೆಯ ಚಂದ್ರಗಿರಿ ನಿಲ್ದಾಣವನ್ನು ಆಂಧ್ರಪ್ರದೇಶದ ಮೊದಲ ಮಹಿಳಾ ರೈಲು ನಿಲ್ದಾಣವಾಗಿ ರೂಪುಗೊಳಿಸಲಾಗಿದೆ.
2018ರಲ್ಲಿ ದಕ್ಷಿಣ ಕೇಂದ್ರ ರೈಲ್ವೆಯು ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸಲು ನಾಲ್ಕು ರೈಲು ನಿಲ್ದಾಣಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಮಹಿಳಾ ಉದ್ಯೋಗಿ ನಿಲ್ದಾಣಗಳಾಗಿ ಮಾರ್ಪಡಿಸಲಾಗಿತ್ತು. ಇದೀಗ ಚಿತ್ತೂರು ಜಿಲ್ಲೆಯ ಚಂದ್ರಗಿರಿ ನಿಲ್ದಾಣವನ್ನು ಆಂಧ್ರಪ್ರದೇಶದ ಮೊದಲ ಮಹಿಳಾ ರೈಲು ನಿಲ್ದಾಣವಾಗಿ ರೂಪುಗೊಳಿಸಲಾಗಿದೆ.
ರೈಲ್ವೆಯ ನಿರ್ಣಾಯಕ ಕಾರ್ಯಾಚರಣೆ ವಿಭಾಗದ ಜೊತೆಗೆ ಮಹಿಳೆಯರು ವಾಣಿಜ್ಯ ಮತ್ತು ಸಿಗ್ನಲಿಂಗ್ ವಿಭಾಗಗಳನ್ನೂ ಇಲ್ಲಿ ನಿರ್ವಹಿಸಬಲ್ಲರು. ಮಹಿಳೆಯರೇ ಇಲ್ಲಿನ ಪ್ರತಿಯೊಂದು ಕೆಲಸಗಳನ್ನೂ ನಿಭಾಯಿಸುತ್ತಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಸಿಬ್ಬಂದಿ ತಮ್ಮ ದಕ್ಷ ಕೆಲಸಕ್ಕಾಗಿ ಉನ್ನತಾಧಿಕಾರಿಗಳಿಂದ ಪ್ರಶಂಸೆ ಗಿಟ್ಟಿಸಿದ್ದಾರೆ.
ಇಲ್ಲಿ ಒಬ್ಬ ಸೂಪರಿಂಟೆಂಡೆಂಟ್, ಮೂವರು ಸಹಾಯಕ ಅಧೀಕ್ಷಕರು ಮತ್ತು ಸಹಾಯಕ ಸಿಬ್ಬಂದಿ ಸೇರಿದ ಹುದ್ದೆಗಳಲ್ಲಿರುವವರು ಇಲ್ಲಿ ಮಹಿಳೆಯರೇ ಆಗಿದ್ದಾರೆ. ನಿಲ್ದಾಣದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದರಿಂದ ಹಿಡಿದು ಪ್ರಯಾಣಿಕರ ಸುರಕ್ಷತೆ, ಸ್ಟೇಷನ್ ಮಾಸ್ಟರ್ ಪಾತ್ರ ಸೇರಿ ಎಲ್ಲ 14 ಇಲಾಖೆಗಳ ಉಸ್ತುವಾರಿ ಇಲ್ಲಿ ಮಹಿಳೆಯರೇ.