ಕುಂಬಳೆ: ಕಳೆದ ಕೆಲವು ವರ್ಷದ ಹಿಂದೆ ಜಿಲ್ಲೆಯ ಹಲವು ಕನ್ನಡ ಶಾಲೆಗಳಿಗೆ ಕನ್ನಡ ಬಾರದ ಅಧ್ಯಾಪಕರನ್ನು ನೇಮಿಸಿ ಭಾರೀ ವಿವಾದ, ಹೋರಾಟಗಳು ನಡೆದು ಕನ್ನಡಿಗರ ಒಕ್ಕೊರಲ ಪ್ರಯತ್ನದ ಫಲವಾಗಿ ಅಲ್ಪ ನೆಮ್ಮದಿ ಲಭಿಸಿದ್ದರೂ ಇದೀಗ ಮತ್ತೆ ಅಂತದೇ ಕಂಟಕ ಎದುರಾಗಿದೆ.
ಕನ್ನಡ ಶಾಲೆಗಳಲ್ಲಿ ಕನ್ನಡ ತಿಳಿಯದ ಅಧ್ಯಾಪಕರನ್ನು ನೇಮಕ ಮಾಡಿ ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಚೆಲ್ಲಾಟ ಮಾಡಲು ಆರಂಭಿಸಿದಾಗ ಕನ್ನಡಿಗರ ಒಕ್ಕೊರಲ ವಿರೋಧದಿಂದ ಅಲ್ಪ ತಣ್ಣಗಾದ ಕನ್ನಡಿಗರೆಲ್ಲರಿಗೂ ಸಮಧಾನದ ನಿಟ್ಟುಸಿರು ಬಿಡುವ ಮಧ್ಯೆ ಅ|ಂತಹ ಮತ್ತೊಂದು ಪ್ರಯತ್ನ ನಡೆದಿರುವುದು ಕನ್ನಡಿಗರ ತಾಳ್ಮೆ ಪರೀಕ್ಷೆಯೇ ಹೌದು.
2014ರ ಅಧ್ಯಾಪಕರನ್ನು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಸಂದರ್ಶನ ಮುಗಿಸಿ ಎರಡನೇ ಹಂತದ ನೇಮಕಾತಿ ನಡೆಸಲಾಗಿದ್ದು, ಇದರಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳ ಅಧ್ಯಾಪಕರ ನೇಮಕಾತಿಯೂ ಸೇರಿದೆ. ಕಳೆದ ಫೆ. 28ರಂದು ಇವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಕೊಟ್ಟಾಯಂ ಜಿಲ್ಲೆಯವರಾದ ಕನ್ನಡ ಗೊತ್ತಿಲ್ಲದ ಅಧ್ಯಾಪಕರು ಅಂಗಡಿಮೊಗರು ಶಾಲೆಯ ಕನ್ನಡ ವಿದ್ಯಾರ್ಥಿಗಳಿಗೆ ತರಗತಿ ನಡೆಸುವುದಕ್ಕೆ ನೇಮಕರಾಗಿದ್ದಾರೆ ಎಂದರೆ ಇದು ಕನ್ನಡವನ್ನು ಇಲ್ಲದಂತೆ ಮಾಡಲಿರುವ ಹುನ್ನಾರ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ವೇದ್ಯವಾಗಿದೆ.
ಕಾಸರಗೋಡಿಗೆ ಸಂವಿಧಾನಬದ್ಧ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ಇರುವುದರಿಂದ ಕನ್ನಡ ತಿಳಿದಿರುವ ಅಧ್ಯಾಪಕರನ್ನೇ ನೇಮಕ ಮಾಡಬೇಕೆಂದು 2016ರಲ್ಲಿ ಕೇರಳ ಹೈಕೋರ್ಟ್ ಆದೇಶಿಸಿದೆ. ಆದರೆ ಈಗ ಮತ್ತೆ ಅದಕ್ಕೂ ಮೊದಲಿನ ಆಯ್ಕೆ ಪ್ರಕ್ರಿಯೆಯಂತೆ ನೇಮಕ ನಡೆಸಲಾಗುತ್ತಿದೆ. ಕಳೆದ ಬಾರಿಯ ನೇಮಕದ ಬಗ್ಗೆ ನೀಡಿದ ಮೂರು ಅರ್ಜಿಗಳು ಇನ್ನೂ ಹೈಕೋರ್ಟ್‍ನಲ್ಲಿದೆ. ಗಡಿನಾಡಲ್ಲಿ ಕನ್ನಡ ತಿಳಿದಿರುವವರನ್ನೇ ನೇಮಕ ಮಾಡಬೇಕೆಂದಿದ್ದರೂ ಅದರ ವಿರುದ್ಧ ನಡೆಸುವ ಸಂಚನ್ನು ಹೋರಾಟ ಮೂಲಕ ಎದುರಿಸುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ. ಭಟ್ ತಿಳಿಸಿದ್ದಾರೆ.
ಅಂಗಡಿಮೊಗರು ಶಾಲೆಯಲ್ಲಿ ಪ್ರತಿಭಟನೆ:
ಅಂಗಡಿಮೊಗರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ಹೈಸ್ಕೂಲು ಭೌತಶಾಸ್ತ್ರ ಹುದ್ದೆಗೆ ಮಲೆಯಾಳಿ ಅಧ್ಯಾಪಕನಿಗೆ ನೇಮಕಾತಿ ನೀಡಿದ ರಾಜ್ಯ ವಿದ್ಯಾಭ್ಯಾಸ ಇಲಾಖೆಯ ನೀತಿಯನ್ನು ಖಂಡಿಸಿ ಪೋಷಕರು ಹಾಗೂ ಸ್ಥಳೀಯ ನಾಗರಿಕರ ನೇತೃತ್ವದಲ್ಲಿ ಸೋಮವಾರ ಶಾಲಾ ಪರಿಸರದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟೂಡಲ್ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯೆ ಪ್ರೇಮಾ ಎಸ್ ರೈ, ಅನಿತ, ಶಿವಪ್ಪ ರೈ, ರಫೀಕ್, ಸತೀಶ್ ರೈ, ತ್ಯಾಂಪಣ್ಣ ರೈ, ರಘುನಾಥ ರೈ, ಶೀನಾ ಎಂ.ಆರ್., ಆನಂದ ಎಂ.ಕೆ., ಲೋಚನ್ ಮುಂತಾದವರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲಿನ ಅನ್ಯಾಯವನ್ನು ಖಂಡಿಸಿ ಮಾತನಾಡಿದರು. ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು ಭಾಗವಹಿಸಿದ್ದರು. ವಿದ್ಯಾಭ್ಯಾಸ ಇಲಾಖೆಯ ಅನ್ಯಾಯದ ಕ್ರಮ ಹಿಂಪಡೆದು ಕನ್ನಡ ಬಲ್ಲ ಅ|ಧ್ಯಾಪಕರನ್ನೇ ನೇಮಕ ಮಾಡಬೇಕೆಂದು ಎಚ್ಚರಿಕೆ ನೀಡಲಾಯಿತು. ಪೃಥ್ವಿರಾಜ್ ಸ್ವಾಗತಿಸಿ, ತೌಪೀಲ್ ವಂದಿಸಿದರು.