ನವದೆಹಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಗಳ ನೆರವಿಗೆ ನಾನಾ ದೇಶದಲ್ಲಿ ನೆಲೆಸಿರುವ ಭಾರತೀಯ ವಿದ್ಯಾರ್ಥಿಗಳ ಸ್ವಯಂ ಸೇವಾ ತಂಡವೊಂದು ಮುಂದೆ ಬಂದಿದೆ. ಇದಕ್ಕಾಗಿ ವಾಟ್ಸ್‌ಆಯಪ್ ಮತ್ತು ಟೆಲಿಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಗುಂಪು ರಚಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ.
ಚೀನಾ, ಉಜ್ಬೇಕಿಸ್ತಾನ್ ಮತ್ತು ಫಿಲಿಪ್ಪೀನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳು ಸಹಾಯ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯೋನ್ಮುಖರಾಗುತ್ತಿದ್ದಾರೆ.
ವ್ಯಾಸಂಗಕ್ಕಾಗಿ ಭಾರತ ಬಿಟ್ಟು ಬರುವ ಮುನ್ನ, ತರಬೇತಿ ಕೇಂದ್ರದಲ್ಲಿ ಒಟ್ಟಿಗೆ ಓದಿದ ಹಲವು ವೈದ್ಯಕೀಯ ವಿದ್ಯಾರ್ಥಿಗಳು ಸಂಪರ್ಕದಲ್ಲಿದ್ದಾರೆ. ಇವರ ಮೂಲಕ ಹಲವು ಗ್ರೂಪ್ ರಚಿಸಲಾಗಿದೆ. ಇಲ್ಲಿ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಪರೀಕ್ಷೆಯ ಶೈಕ್ಷಣಿಕ ಸಾಮಾಗ್ರಿ, ನೋಟ್ಸ್ ಮತ್ತು ಸದ್ಯದ ಬೆಳವಣಿಗೆಯನ್ನು ವಿನಿಯಮ ಮಾಡಿಕೊಳ್ಳಲಾಗುತ್ತಿದೆ ಎಂದು ಚೀನಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ಪಿ.ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಉಕ್ರೇನ್ ಸಂಘರ್ಷ ಆರಂಭ ಆದ ಬಳಿಕ ನಮ್ಮ ಸಂಪರ್ಕದಲ್ಲಿ ಇದ್ದವರನ್ನು ಒಟ್ಟುಗೂಡಿಸಿ ಗ್ರೂಪ್ ರಚಿಸಿದ್ದೇವೆ. ಇದರ ಲಿಂಕ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು. ಕೇವಲ ಎರಡೇ ದಿನಗಳಲ್ಲಿ ಐದು ಸಾವಿರ ಮಂದಿ ಸಬ್‌ಸ್ಕ್ರೈಬ್ ಆದರು. ವರ್ಚುಯಲ್ ವಾರ್ ರೂಂ ಕೂಡ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.
ಯುದ್ಧ ವಲಯದಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ನಿರಂತರ ಸಂಪರ್ಕ ಸಾಧಿಸುವುದು. ಅವರು ಅಕ್ಕಪಕ್ಕ ಸೂಕ್ತ ಸ್ಥಳಗಳಲ್ಲಿ ಉಳಿದುಕೊಳ್ಳಲು ಸಹಾಯ ಮಾಡುವುದರಲ್ಲಿ ಯುವ ಸ್ವಯಂ ಸೇವಕರು ಕಾರ್ಯಪ್ರವೃತ್ತರಾಗಿದ್ದಾರೆ.
ಈ ಗ್ರೂಪ್‌ಗಳಲ್ಲಿ ಪ್ರತಿ 15 ನಿಮಿಷಕ್ಕೊಮ್ಮೆ 100 ಸಂದೇಶಗಳು ಬರುತ್ತಿವೆ. ಸಹಾಯ ಕೇಳಿದ ಗರಿಷ್ಠ ಮನವಿಗಳಿಗೆ ಸ್ಪಂದಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ನಮ್ಮಲ್ಲಿಯೇ ವಿಭಾಗವನ್ನೂ ರಚಿಸಿಕೊಂಡಿದ್ದೇವೆ. ಸಂಕಷ್ಟದಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ನೆರವಿಗೆ ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲಾಗುತ್ತಿದೆ. ತಮ್ಮ ಮಕ್ಕಳ ಮಾಹಿತಿ ಪಡೆಯಲು ಪೋಷಕರು ಕೂಡ ನಮ್ಮ ಗ್ರೂಪ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಫಿಲಿಪ್ಪೀನ್ಸ್ ವಿದ್ಯಾರ್ಥಿನಿ ಕಗಾಯಾನ್ ಹೇಳಿದ್ದಾರೆ.
ವಿದ್ಯಾರ್ಥಿಗಳ ಇಂಟರ್‌ನೆಟ್ ಸಂಪರ್ಕ ಮತ್ತು ಮೊಬೈಲ್ ಬ್ಯಾಟರಿ ಇರುವ ತನಕ ಸಹಾಯ ಮಾಡಲು ಸಾಧ್ಯವಾಗುತ್ತಿದೆ ಎಂದು ಮತ್ತೊರ್ವ ವಿದ್ಯಾರ್ಥಿ ಆಕ್ಷರ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಅಂದಾಜು 20,000 ವಿದ್ಯಾರ್ಥಿಗಳು ಸಿಲುಕಿದ್ದರು, ಅದರಲ್ಲಿ 17,000 ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ.