'ಮೊದಲ ಜಾಗತಿಕ ಮಹಾಯುದ್ಧದಲ್ಲಿ ಮದ್ದುಗುಂಡುಗಳನ್ನೂ ಎರಡನೇ ಮಹಾಯುದ್ಧದಲ್ಲಿ ಅಣುಬಾಂಬನ್ನೂ ಪ್ರಯೋಗಿಸಿರುವ ನಾವು, ಮೂರನೆಯ ಮಹಾಯುದ್ಧವಾದಲ್ಲಿ ಯಾವ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಬಹುದು?!' ಶತಮಾನದ ವಿಜ್ಞಾನಿ ಐನ್‍ಸ್ಟೀನ್ ಅವರನ್ನು ಒಮ್ಮೆ ಸಭೆಯೊಂದರಲ್ಲಿ ತಬ್ಬಿಬ್ಬುಗೊಳಿಸಿದ ಪ್ರಶ್ನೆಯಿದು.
'ಮೂರನೇ ಮಹಾಯುದ್ಧದ ಕುರಿತು ಸದ್ಯ ಏನನ್ನೂ ಹೇಳಲಾರೆ. ಆದರೆ ನಾಲ್ಕನೆಯ ಯುದ್ಧದಲ್ಲಿ ಮಾತ್ರ ಮನುಷ್ಯ ಬಿಲ್ಲುಬಾಣಗಳನ್ನು ಬಳಸುವುದು ಖಾತರಿ'! ಎಂದ ಐನ್‍ಸ್ಟೀನ್‍ರ ಆ ಮಾರ್ಮಿಕ ನುಡಿಗಳು ಯುದ್ಧಗಳು ತಂದೊಡ್ಡಬಹುದಾದ ಭೀಕರತೆಯನ್ನೂ ವಿನಾಶದ ಪ್ರಮಾಣವನ್ನೂ ಧ್ವನಿಸಿದಂತಿದ್ದವು.
ಯುದ್ಧವೆಂದರೆ ಹಾಗೆಯೇ, ಅಲ್ಲಿ 'ಗೆದ್ದವನು ಸೋತ, ಸೋತವನು ಸತ್ತ' ಅನ್ನುವ ಮಾತು ಅಕ್ಷರಶಃ ಸತ್ಯ. ಕೇವಲ ವೈಯಕ್ತಿಕ ಪ್ರತಿಷ್ಠೆ, ತಿಕ್ಕಲುತನ, ಅಹಂಕಾರದ ಕಾರಣಕ್ಕೆ ಜಗತ್ತು ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಾಗಿದೆ. ಹಿಂಸಾವಿನೋದಿ, ಜೀವವಿರೋಧಿ ಯುದ್ಧದಾಹಿ ಮನಸುಗಳು ಮತ್ತೊಂದು ಮಹಾಯುದ್ಧಕ್ಕಾಗಿ ಬಹುಕಾಲದಿಂದ ಕಾತರಿಸುತ್ತಲೇ ಕನವರಿಸುತ್ತಲೇ ಇವೆ. ರಾಗದ್ವೇಷಗಳಲ್ಲಿ ಮಿಂದೇಳುತ್ತಿರುವ ಮನುಷ್ಯಜೀವಿ ಎಂದಿಗೂ ಚರಿತ್ರೆಯಿಂದ ಪಾಠ ಕಲಿಯುವುದಿಲ್ಲ.
ಇಂಕಾ ನಾಗರಿಕತೆ ಮಂಕಾಗಿದ್ದು, ರೋಮ್ ಸಾಮ್ರಾಜ್ಯ ಕುಸಿದಿದ್ದು, ಮಾಯಾ ನಾಗರಿಕತೆ ಮಾಯವಾಗಿಹೋಗಿದ್ದರ ಕಾರಣವನ್ನು ಅರಿಯುವ ವಿವೇಕವಾಗಲೀ ವ್ಯವಧಾನವಾಗಲೀ ಅವನಿಗಿಲ್ಲ. ಕೊರೊನಾ ಕರಾಳತೆಯ ಕಾರ್ಮೋಡ ಅಷ್ಟಿಷ್ಟು ಸರಿಯಿತೆಂದು ಜಗತ್ತು ಈಗಷ್ಟೇ ನಿಟ್ಟುಸಿರು ಬಿಡುವ ಹೊತ್ತಿನಲ್ಲಿ ಅದಕ್ಕಿಂತಲೂ ಭೀಕರ ಸನ್ನಿವೇಶವನ್ನು ಆಹ್ವಾನಿಸಿದಂತೆ ಪರಸ್ಪರ ಯುದ್ಧಕಾಯಲು ಅಲ್ಲಿ ರಷ್ಯಾ- ಉಕ್ರೇನ್ ಮುಖಾಮುಖಿಯಾಗಿವೆ. ಅದೆಷ್ಟೋ ಹೆತ್ತವರನ್ನು ಪುತ್ರಶೋಕಕ್ಕೂ, ಹಸುಳೆಗಳನ್ನು ಅನಾಥ ಸ್ಥಿತಿಗೂ ನೂಕುತ್ತಿರುವ, ಪರಿಸರವನ್ನು ಗಾಸಿಗೊಳಿಸುತ್ತಿರುವ ಈ ಸಂದರ್ಭ ಏನನ್ನು ಸಾಧಿಸಲು ಹೊರಟಿದೆ ಎಂದು ಆಳುವವರು ಅವಲೋಕಿಸಬೇಕಿದೆ.
'ಯುದ್ಧಗಳು ಕೊಲೆಯನ್ನು ಕಲೆಯಾಗಿಸುವ ಅಖಾಡ' ಎಂದಿದ್ದರು ಕುವೆಂಪು. ಯುದ್ಧಭೂಮಿಗಳೆಂಬ ವಿಸ್ತಾರವಾದ ಸ್ಮಶಾನಗಳಲ್ಲಿ ಬಿತ್ತಿ ಬೆಳೆಯಬಹುದಾದ ಬೆಳೆಯಾದರೂ ಯಾವುದಿದೆ? ಜಗತ್ತಿನೆಲ್ಲೆಡೆ ನಡೆಯುವ ಬಹುತೇಕ ಯುದ್ಧ, ಹಿಂಸೆ, ಕ್ರೌರ್ಯಗಳು ಪೂರ್ವ ಪ್ರಾಯೋಜಿತವಾಗಿದ್ದು ಕೆಲವೇ ಮಂದಿಯ ಅಹಂಕಾರಕ್ಕೋ ಅಧಿಕಾರದಾಹಕ್ಕೋ ಅಮಾಯಕರ ಬಲಿ ಕೇಳುತ್ತವೆ ಮಾತ್ರವಲ್ಲ ಶಸ್ತ್ರಾಸ್ತ್ರ ಮಾರುವ ಮಾರುಕಟ್ಟೆಗಳಾಗಿ, ಹರಿಯುವ ನೆತ್ತರಲ್ಲಿ ಚುನಾವಣಾ ನೆಲವನ್ನು ಹದಗೊಳಿಸಿ 'ಮತ' ಫಸಲಿಗೆ ನಡೆಸುವ ತಯಾರಿಯಾಗಿರುತ್ತವೆ.
ಎರಡನೇ ಮಹಾಯುದ್ಧದ ಹೊಸ್ತಿಲಲ್ಲಿ ಯುದ್ಧೋನ್ಮಾದದಲ್ಲಿದ್ದ ಹಿಟ್ಲರ್‌ಗೆ ಮಹಾತ್ಮ ಗಾಂಧಿ ಕೋರಿಕೊಂಡಿದ್ದು ಹೀಗೆ... 'ಮಾನವೀಯತೆಯ ಉಳಿವಿಗಾಗಿ ಈ ಪತ್ರ ಬರೆಯಬೇಕಾದ್ದು ಅವಶ್ಯಕವೆಂದು ಭಾವಿಸುವೆ, ಎಂತಹ ಅನಿವಾರ್ಯದಲ್ಲೂ ಹಿಂಸೆಯನ್ನು ಪ್ರಜ್ಞಾಪೂರ್ವಕವಾಗಿ ನಿರಾಕರಿಸಿ ಬಹಳಷ್ಟು ಯಶಸ್ಸು ಗಳಿಸಿದ ಮನುಷ್ಯನ ವಿನಂತಿಯನ್ನು ನೀವು ಆಲಿಸದಿರಲಾರಿರೇ? ಈ ಹೊತ್ತಿನ ಸಂಭಾವ್ಯ ಯುದ್ಧವನ್ನು ತಡೆಯಬಲ್ಲ ವ್ಯಕ್ತಿಯೊಬ್ಬ ಜಗತ್ತಿನಲ್ಲಿದ್ದರೆ ಅದು ನೀವೆ! ಯುದ್ಧವು ಮನುಷ್ಯನನ್ನು ಮೃಗಗಳ ಸಾಲಿನಲ್ಲಿ ನಿಲ್ಲಿಸಬಲ್ಲದು. ಎಷ್ಟೇ ದೊಡ್ಡ ಕಾರಣವಿದ್ದರೂ ಯುದ್ಧಕ್ಕಾಗಿ ನೀವು ದೊಡ್ಡ ಬೆಲೆಯನ್ನು ತೆರಲೇಬೇಕಾಗುತ್ತದೆ...'
ಜಗತ್ತು ಮತ್ತೆಮತ್ತೆ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಕಳೆದುಕೊಳ್ಳುತ್ತಲೇ ಸಾಗುತ್ತಿದೆ. ದ್ವೇಷ, ಹಿಂಸೆ- ಕ್ರೌರ್ಯಗಳ ವಿಜೃಂಭಣೆಯಲ್ಲಿ ತಲ್ಲಣಿಸುತ್ತಿರುವ ಅದು ಕೊರೊನಾ ವೈರಾಣುವೊಂದು ಮೊನ್ನೆತಾನೆ ಕಲಿಸಿಹೋಗಿದ್ದ ಮಾನವೀಯತೆಯ ಪಾಠವನ್ನೂ ಮರೆತಂತಿದೆ. ಮನುಷ್ಯ ತನ್ನ ಆರೋಗ್ಯ- ಆಯುಷ್ಯದ ಅನಿಶ್ಚಿತತೆಯನ್ನೂ ಧುತ್ತನೆ ಬಂದೆರಗುವ ಪ್ರಾಕೃತಿಕ ಅವಘಡಗಳನ್ನೂ ಪ್ರೀತಿ, ಕರುಣೆ, ಸಹಕಾರ ತತ್ವದಲ್ಲಿ ಮೀರಲು ಪ್ರಯತ್ನಿಸಬೇಕಿತ್ತು. ಎಲ್ಲಾ ತಾಯಂದಿರೂ ತಮ್ಮ ಮಕ್ಕಳಿಗೆ ಹಾಲೂಡಿಸಿ ಬೆಳೆಸುತ್ತಾರೆಯೇ ವಿನಾ ವಿಷವುಣಿಸಿ ಬೆಳೆಸುವುದಿಲ್ಲ. ಹಾಗಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರೇಕೆ ಪರಸ್ಪರ ವಿಷ ಕಾರಿಕೊಳ್ಳುತ್ತಾರೆ? ಹಗೆ-ದ್ವೇಷವನ್ನು ಉಸಿರಾಡುತ್ತಾರೆ? ಕ್ರೌರ್ಯವನ್ನು ಶೌರ್ಯವೆಂಬಂತೆ ಆರಾಧಿಸುತ್ತಾರೆ? ಮತ್ತೊಬ್ಬ ಮನುಷ್ಯನ ದಯನೀಯ ಸ್ಥಿತಿಯನ್ನೂ ಸಾವು-ನೋವುಗಳನ್ನೂ ಹೀಗೆಲ್ಲಾ ಸಂಭ್ರಮಿಸುತ್ತಾರೆ?! ಇದಕ್ಕೆ ಉತ್ತರ ಸರಳ. ಕೇವಲ ಮನುಷ್ಯನಾಗಿ ಉಳಿಯುವುದು, ಅಷ್ಟೆ.
ಹಿರಿಯರು ಹೇಳಿದ್ದು ನಿಜ, ಜಾಗತಿಕವಾಗಿ ಜನಜಾಗೃತಿ ಮೂಡಬೇಕು. ಎಲ್ಲಾ ತರಹದ ಯುದ್ಧ-ಹಿಂಸೆಗಳನ್ನು ಒಕ್ಕೊರಲಿನಿಂದ ಪ್ರತಿಭಟಿಸಬೇಕು. ಮನುಷ್ಯನೀಗ ವಿಕೃತಿ, ಸಂಕುಚಿತತೆಗಳನ್ನು ಮರೆತು ಸೌಹಾರ್ದವನ್ನು ಅಪ್ಪಿಕೊಳ್ಳಬೇಕು. ಎಲ್ಲೋ ಕುಡಿಯೊಡೆದ ಹಸಿರು ನಮ್ಮನಿಲ್ಲಿ ಪೊರೆಯುತ್ತದೆ, ಎಲ್ಲೋ ಹುಟ್ಟಿದ ನದಿ ನಮ್ಮನಿಲ್ಲಿ ಪೊರೆಯುತ್ತದೆ. ಎಲ್ಲೋ ಮೂಡಿದ ಬೆಳಕು ನಮ್ಮನೆಲ್ಲ ಬೆಳಗುತ್ತದೆ. ಎಲ್ಲಿಯದೋ ನೋವು, ನಂಜು, ಯುದ್ಧ, ರೋಗಗಳು ಇಷ್ಟು ದೂರಕ್ಕೂ ಹಬ್ಬುತ್ತವೆ.
ಜಗದೊಳಗೆ ಅಲ್ಲಿ-ಇಲ್ಲಿ ಎಂಬುದಕ್ಕಿಲ್ಲ ಅರ್ಥ, ನಾನು-ನೀನು ಎಂಬುವುದೆಲ್ಲ ವ್ಯರ್ಥ. ಹಂಚುವುದಾದರೆ ಒಲವ ಹಂಚೋಣ, ಅಂಚಿಲ್ಲದ, ಸಂಚಿಲ್ಲದ ಭುವಿಯೊಂದನ್ನು ಕಟ್ಟಿ ನಿಲ್ಲಿಸೋಣ, ಎಳೆಯ ಕುಡಿಗಳಿಗಾಗಿ ತಣ್ಣನೆಯ ನಾಳೆಗಳ ಉಳಿಸಿ ಹೋಗೋಣ...