ನವದೆಹಲಿ: 'ಪೂರ್ವ ಲಡಾಖ್ ಗಡಿಯಿಂದ ಸೇನೆಯನ್ನು ಹಿಂಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಈ ಕಾರ್ಯ ನಾವು ಬಯಸಿದಷ್ಟು ವೇಗದಲ್ಲಿ ನಡೆಯುತ್ತಿಲ್ಲ' ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಶುಕ್ರವಾರ ಹೇಳಿದರು.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಉಭಯ ದೇಶಗಳ ನಡುವಿನ ಸಂಬಂಧ ಸಹಜಸ್ಥಿತಿಗೆ ಮರಳಬೇಕು ಎಂದಾದಲ್ಲಿ ಗಡಿಗಳಲ್ಲಿನ ಉದ್ವಿಗ್ನತೆ ಶಮನವಾಗಿ, ಶಾಂತಿ ನೆಲೆಸುವುದು ಮುಖ್ಯ' ಎಂದು ಪ್ರತಿಪಾದಿಸಿದರು.
'ಪೂರ್ವ ಲಡಾಖ್ ಗಡಿಯಲ್ಲಿನ ಸಂಘರ್ಷವನ್ನು ಶಮನಗೊಳಿಸುವ ಸಲುವಾಗಿ ಉಭಯ ದೇಶಗಳ ಮಿಲಿಟರಿಯ ಉನ್ನತ ಅಧಿಕಾರಿಗಳ ನಡುವೆ ಈ ವರೆಗೆ 15 ಸುತ್ತುಗಳ ಮಾತುಕತೆ ನಡೆದಿವೆ. ಸಂಘರ್ಷಪೀಡಿತ ಕೆಲ ಗಡಿ ಠಾಣೆಗಳಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಷಯದಲ್ಲಿ ಪ್ರಗತಿ ಸಾಧಿಸಲಾಗಿದೆ' ಎಂದರು.
'ಗಡಿಯಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವ ಕಾರ್ಯವಾಗಬೇಕು. ಹೀಗಾದಾಗ ಮಾತ್ರ, ಉಭಯ ದೇಶಗಳ ನಡುವಿನ ಸಂಘರ್ಷವನ್ನು ಶಮನ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಯಲು ಸಾಧ್ಯ' ಎಂದರು.
'ಗಡಿಯಲ್ಲಿ ಸೃಷ್ಟಿಯಾಗಿರುವ ಈ ಬಿಕ್ಕಟ್ಟು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದು ಕಳೆದ ಎರಡು ವರ್ಷಗಳಲ್ಲಿನ ವಿದ್ಯಮಾನಗಳೇ ಹೇಳುತ್ತವೆ'.
'ವಾಂಗ್ ಅವರೊಂದಿಗೆ 3-4 ಗಂಟೆಗಳ ಕಾಲ ಮಾತುಕತೆ ನಡೆಯಿತು. ಪೂರ್ವ ಲಡಾಖ್ ಗಡಿಗೆ ಸಂಬಂಧಿಸಿ ಭಾರತದ ನಿಲುವುಗಳನ್ನು ಅವರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ' ಎಂದೂ ಅವರು ಹೇಳಿದರು.
ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕ ಕೃತ್ಯಗಳು ಸಹ ಮಾತುಕತೆ ವೇಳೆ ಪ್ರಸ್ತಾಪಗೊಂಡವು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದ್ವಿಪಕ್ಷೀಯ ಸಂಬಂಧ ವೃದ್ಧಿ: ಅಡೆತಡೆಗಳ ನಿವಾರಣೆಗೆ ಕರೆ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿ, 'ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ' ಹೇಳಿದರು ಎಂದು ಮೂಲಗಳು ಹೇಳಿವೆ.
ಪೂರ್ವ ಲಡಾಖ್ ಸೇರಿದಂತೆ ಚೀನಾಕ್ಕೆ ಹೊಂದಿದ ಗಡಿಗಳಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಅಗತ್ಯತೆಯನ್ನು ವಿವರಿಸಿದ ಅವರು, ಪರಸ್ಪರರಲ್ಲಿ ನಂಬಿಕೆ ವೃದ್ಧಿ ಹಾಗೂ ಪೂರಕ ವಾತಾವರಣ ನಿರ್ಮಾಣದಿಂದ ಇದನ್ನು ಸಾಧಿಸಬಹುದು ಎಂಬುದಾಗಿ ಡೋಭಾಲ್ ಹೇಳಿದರು ಎಂದು ತಿಳಿಸಿವೆ.
'ಉಭಯ ದೇಶಗಳ ನಡುವೆ ರಾಜತಾಂತ್ರಿಕ ಹಾಗೂ ಮಿಲಿಟರಿ ಅಧಿಕಾರಿಗಳ ಮಟ್ಟದ ಮಾತುಕತೆ ಮುಂದುವರಿಯಬೇಕು. ಗಡಿಗಳಲ್ಲಿ ಸಹಜಸ್ಥಿತಿ ಮರುಸ್ಥಾಪನೆಗೆ ಇಂಥ ಮಾತುಕತೆಗಳು ಅಗತ್ಯ ಎಂಬುದಾಗಿ ಅವರು ಪ್ರತಿಪಾದಿಸಿದರು'.
ಗಡಿಗೆ ಸಂಬಂಧಿಸಿ ಮಾತುಕತೆಗಳನ್ನು ಮುಂದುವರಿಸಲು ಚೀನಾಕ್ಕೆ ಭೇಟಿ ನೀಡುವಂತೆ ಅಜಿತ್ ಡೋಭಾಲ್ ಅವರಿಗೆ ಚೀನಾ ನಿಯೋಗ ಆಹ್ವಾನ ನೀಡಿತು ಎಂದು ಮೂಲಗಳು ಹೇಳಿವೆ.