ಲಂಡನ್: ಕರೊನಾ ವೈರಸ್ನ ಒಮಿಕ್ರಾನ್ಗಿಂತಲೂ ಹೆಚ್ಚು ಮಾರಕವಾದ ರೂಪಾಂತರಿ ಮುಂದಿನೆರಡು ವರ್ಷದಲ್ಲಿ ಕಾಡಲಿದೆ ಎಂದು ಬ್ರಿಟನ್ನ ಸಾಂಕ್ರಾಮಿಕ ರೋಗತಜ್ಞರು ಎಚ್ಚರಿಸಿದ್ದಾರೆ. ಇಂಥದ್ದೊಂದು ಮಾರಕವಾದ ವೈರಸ್ ಪ್ರಭೇದ ದಾಂಗುಡಿಯಿಡುವ 'ಸಂಭಾವ್ಯತೆ ಹೆಚ್ಚಾಗಿದೆ' ಎಂದು ಇಂಗ್ಲೆಂಡ್ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್ ವಿಟ್ಟಿ ಹೇಳಿದ್ದಾರೆ.
ಸಾಂಕ್ರಾಮಿಕತೆಗೆ ಸಂಬಂಧಿಸಿ ನಾವೂ ಇನ್ನೂ ದೂರ ಸಾಗಬೇಕಾಗಿದೆ. ಯಾಕೆಂದರೆ 'ಇನ್ನಷ್ಟು ಅಚ್ಚರಿಯ' ವೈರಾಣುಗಳು ಉದ್ಭವಿಸಬಹುದು ಎಂದು ವಿಟ್ಟಿ ಹೇಳಿದ್ದಾರೆ. ಫ್ಲೂ ರೀತಿಯಲ್ಲೇ ಸಾವಿನ ಅಪಾಯ ಒಟ್ಟಿರುವ ವೈರಸ್, ಜೀವನ ಪರ್ಯಂತ ನಮ್ಮ ಜೊತೆಯಲ್ಲೇ ಇರಲಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕದಲ್ಲಿ ಹೊಸ ತಳಿ ದಾಳಿ ಸಂಭವ: ಜಗತ್ತಿನ ಹಲವು ಭಾಗಗಳಲ್ಲಿ ಕರೊನಾ ಸೋಂಕಿನ ಪ್ರಮಾಣ ಏರುತ್ತಿರುವುದರ ನಡುವೆ, ಅಮೆರಿಕದಲ್ಲಿ ವೈರಸ್ನ ಹೊಸ ತಳಿಯೊಂದು ದಾಳಿ ಮಾಡುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೊಸ ರೂಪಾಂತರಿ ಯಾವಾಗ ಪತ್ತೆಯಾಗಬಹುದೆಂದು ಇನ್ನೂ ತಿಳಿದಿಲ್ಲ ಎಂದವರು ಹೇಳಿದ್ದಾರೆ.
1,685 ಹೊಸ ಕೇಸ್: ಭಾರತದಲ್ಲಿ ಶುಕ್ರವಾರ ಕೋವಿಡ್ ಸೋಂಕಿನ 1,685 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,30,16,372ಕ್ಕೆ ಏರಿದೆ. 83 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 5,16,755ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿನ ಚೇತರಿಕೆ ದರ ಶೇಕಡ 98.75 ಆಗಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.24 ಹಾಗೂ ಸಾಪ್ತಾಹಿಕ ದರ ಶೇ. 0.33 ಆಗಿದೆ. ದೇಶದಲ್ಲಿ ಕೋವಿಡ್-ತಡೆ ಲಸಿಕೆ ನೀಡಿಕೆ ಪ್ರಮಾಣ 182.55 ಕೋಟಿ ಡೋಸ್ ದಾಟಿದೆ.