ಭೂಪಾಲ್: ಕೈದಿಗಳು ಮುಕ್ತ ವಿಶ್ವವಿದ್ಯಾಲಯಗಳಿಂದ ಕಂಪ್ಯೂಟರ್ ಕೌಶಲ್ಯ ತರಬೇತಿ, ಡಿಪ್ಲೋಮಾ, ಡಿಗ್ರಿ ಪಡೆಯುವುದು ಹೊಸದಲ್ಲ. ಆದರೆ, ಜೈಲು ಶಿಕ್ಷೆ ಅವಧಿ ಮುಗಿದ ನಂತರ ಅರ್ಚಕರಾದರೆ ಹೇಗೆ?
ಭೂಪಾಲ್ ಸೆಂಟ್ರಲ್ ಜೈಲಿನಲ್ಲಿ ವಿವಿಧ ವೈದಿಕ ಪದ್ಧತಿ ಕುರಿತ ಕೈದಿಗಳಿಗೆ ತರಬೇತಿ ನೀಡಲು ಮಧ್ಯ ಪ್ರದೇಶ ಜೈಲು ಕಾರಾಗೃಹ ಇಲಾಖೆಯೊಂದಿಗೆ ಧಾರ್ಮಿಕ ಸಂಘಟನೆ ಅಖಿಲ ವಿಶ್ವ ಗಾಯತ್ರಿ ಪರಿಷತ್ (ಎವಿಜಿಪಿ) ಕೈ ಜೋಡಿಸಿದೆ. ಇದರಿಂದಾಗಿ ಅವರು ಪುರೋಹಿತರಾಗಿ ಜೈಲಿನಿಂದ ಬಿಡುಗಡೆಯಾದ ನಂತರ ಗೌರವಯುತವಾಗಿ ಜೀವನ ನಡೆಸಬಹುದಾಗಿದೆ.
ಮಾರ್ಚ್ 1 ರಿಂದ ಆರಂಭವಾಗಿರುವ ತರಗತಿಗಳು ಮಾರ್ಚ್ 31ಕ್ಕೆ ಅಂತ್ಯವಾಗಲಿದೆ. ಜೈಲಿನ ಲೈಬ್ರರಿಯಲ್ಲಿ 15 ಥಿಯೇರಿ ತರಗತಿಗಳನ್ನು ನಡೆಸಲಾಗಿದೆ. ಕೋರ್ಸಿನ ಮಧ್ಯೆ ನಡೆಸಲಾದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಅವರಿಂದ ಶೇ. 10 ರಿಂದ 15 ರಷ್ಟು ಫಲಿತಾಂಶವನ್ನು ನಿರೀಕ್ಷಿಸಿದ್ದೇವು. ಆದರೆ, ಸುಮಾರು ಶೇ. 60 ರಷ್ಟು ಫಲಿತಾಂಶ ಬಂದಿದೆ. ಹೋಳಿ ನಂತರ, ಕೈದಿಗಳಿಗೆ ತರಬೇತಿ ನೀಡಲು ಪ್ರಾಕ್ಟಿಕಲ್ ತರಗತಿಗಳನ್ನು ಆರಂಭಿಸಲಾಗುವುದು ಎಂದು ಎವಿಜಿಪಿ ಪ್ರತಿನಿಧಿ ರಮೇಶ್ ನಾಗರ್ ತಿಳಿಸಿದ್ದಾರೆ.
ಅರ್ಚಕ ವೃತ್ತಿ ತರಬೇತಿ ಪಡೆಯುತ್ತಿರುವ ಕೈದಿಗಳಲ್ಲಿ ಶಾಲೆ ಬಿಟ್ಟವರು ಸೇರಿದಂತೆ ಕೆಲವರು ಔಪಚಾರಿಕ ಶಿಕ್ಷಣ ಪಡೆದಿದ್ದು, ಆರು ತಿಂಗಳಲ್ಲಿ ಅವರು ಬಿಡುಗಡೆಯಾಗಲಿದ್ದಾರೆ. ಈ ಕೋರ್ಸಿಗೆ ವಿದ್ಯಾರ್ಥಿಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಾಗುತ್ತಿದೆ ಎಂದು ಭೂಪಾಲ್ ಸೆಂಟ್ರಲ್ ಜೈಲು ಉಪ ಮಹಾನಿರ್ದೇಶಕರಾದ ಪ್ರಿಯದರ್ಶನ್ ಶ್ರಿವಾಸ್ತವ ಹೇಳಿದ್ದಾರೆ.