ತಿರುವನಂತಪುರ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿದ ಸೂಚನೆ ಆಧಾರದ ಮೇಲೆ ಎಚ್ಚರಿಕೆ ನೀಡಲಾಗಿದೆ.
ಮಂಗಳವಾರದವರೆಗೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಮಳೆಯಾಗಲಿದೆ. ಪ್ರಸ್ತುತ ವಾಯುಭಾರ ಕುಸಿತದ ಪ್ರದೇಶವು ಅತ್ಯಂತ ಕಡಿಮೆ ಒತ್ತಡವಾಗಿ ಮಾರ್ಪಟ್ಟಿದೆ. ಇದು ಶ್ರೀಲಂಕಾದ ಈಶಾನ್ಯಕ್ಕೆ 310 ಕಿಮೀ, ನಾಗಪಟ್ಟನಂನ ಆಗ್ನೇಯಕ್ಕೆ 300 ಕಿಮೀ, ಪುದುಚೇರಿಯ ಆಗ್ನೇಯಕ್ಕೆ 320 ಕಿಮೀ ಮತ್ತು ಚೆನ್ನೈನಿಂದ 390 ಕಿಮೀ ಆಗ್ನೇಯದಲ್ಲಿದೆ.
ಗುಡುಗು ಸಹಿತ ಮಳೆಯಾಗುವ ಸಂಭವವಿರುವುದರಿಂದ ಎಚ್ಚರಿಕೆ ವಹಿಸಬೇಕು. ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆಯವರೆಗೆ ಸಿಡಿಲು ಬಡಿಯುವ ಸಾಧ್ಯತೆಗಳಿವೆ. ಆದ್ದರಿಂದ ಈ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗದಂತೆ ಅಧಿಕಾರಿಗಳು ಸೂಚಿಸಿರುವರು. ಸಿಡಿಲಿನ ಮೊದಲ ಲಕ್ಷಣ ಕಂಡ ತಕ್ಷಣ ಸುರಕ್ಷಿತ ಕಟ್ಟಡಕ್ಕೆ ತೆರಳಬೇಕು. ತೆರೆದ ಸ್ಥಳದಲ್ಲಿ ಉಳಿಯುವುದು ಗುಡುಗು ಸಹಿತ ಮಳೆಯ ಅಪಾಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚಬೇಕು. ಬಾಗಿಲು ಮತ್ತು ಕಿಟಕಿಗಳ ಬಳಿ ನಿಲ್ಲಬಾರದು. ಕಟ್ಟಡದ ಒಳಗೆ ಕುಳಿತುಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಗೋಡೆ ಅಥವಾ ನೆಲವನ್ನು ನೇರವಾಗಿ ಸ್ಪರ್ಶಿಸದಂತೆ ಎಚ್ಚರಿಕೆ ವಹಿಸಬೇಕು. ಗೃಹೋಪಯೋಗಿ ಉಪಕರಣಗಳ ಸಂಪರ್ಕ ಕಡಿತಗೊಳಿಸಬೇಕು. ಗುಡುಗು ಸಹಿತ ಮಳೆಯ ಸಮಯದಲ್ಲಿ ವಿದ್ಯುತ್ ಉಪಕರಣಗಳ ಸಾಮೀಪ್ಯದಿಂದ ದೂರವಿರಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.