ಕಾಸರಗೋಡು: ರಾಜ್ಯ ಬಜೆಟ್‍ನಿಂದ ಕಾಸರಗೋಡಿಗೆ ತೀವ್ರ ನಿರಾಸೆಯಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಜಿಲ್ಲೆಯ ಮೂಲ ಅಭಿವೃದ್ಧಿಗೆ 75 ಕೋಟಿ ಮೀಸಲಿಡಲಾಗಿದೆ. ಬಜೆಟ್‍ನಲ್ಲಿ ಮಹತ್ವದ ಘೋಷಣೆಯಾಗಿದ್ದರೂ ಇಡುಕ್ಕಿ ಮತ್ತು ವಯನಾಡು ಪ್ಯಾಕೇಜ್‍ಗಳ ಜತೆಗೆ 75 ಕೋಟಿ ರೂ. ಮಾತ್ರ ಘೋಷಿಸಲಾಗಿದೆ. ಇದೇ ವೇಳೆ ಕಳೆದ ವರ್ಷ ಬಜೆಟ್ ನಲ್ಲಿ 125 ಕೋಟಿ ರೂ.ಘೋಷಿಸಲಾಗಿತ್ತು. ಕಾಸರಗೋಡಿನ ಹಿಂದುಳಿದಿರುವಿಕೆ ನಿವಾರಿಸಲು 2012ರಲ್ಲಿ ಘೋಷಿಸಿದ ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಪ್ರತಿ ವರ್ಷ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅಭಿವೃದ್ಧಿ ಪ್ಯಾಕೇಜ್ ಅನುಷ್ಠಾನಗೊಳಿಸಲು 12,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಘೋಷಣೆಯ ಸಂದರ್ಭದಲ್ಲಿ ಸೂಚಿಸಲಾಗಿದೆ. ಪ್ರತಿ ವರ್ಷ ಹಣ ಬಿಡುಗಡೆ ಮಾಡುವುದಾಗಿಯೂ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಶಾಲಾ ಕಟ್ಟಡ, ಸೇತುವೆ, ತಡೆಗೋಡೆಯಂತಹ ನೂರಾರು ಯೋಜನೆಗಳನ್ನು ಅಭಿವೃದ್ಧಿ ಪ್ಯಾಕೇಜ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಇದೇ ವೇಳೆ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜು ಉಕ್ಕಿನಡ್ಕ, ಕೆಲ್ ಮತ್ತು ಇಎಂಎಲ್‍ಗೆ ಯಾವುದೇ ಮೊತ್ತವನ್ನು ಬಜೆಟ್‍ನಲ್ಲಿ ಘೋಷಿಸಲಾಗಿಲ್ಲ.
ಭರವಸೆ ಮೂಡಿಸಿದ ಪೆರಿಯ ಏರ್‍ಸ್ಟ್ರಿಪ್:
ಪೆರಿಯ ಏರ್‍ಸ್ಟ್ರಿಪ್ ಮತ್ತು ಬಾವಿಕ್ಕೆರೆ ಬ್ಯಾರಿಯರ್ ಟೂರಿಸಂನ ಪ್ರವಾಸೋದ್ಯಮ ಸಾಮಥ್ರ್ಯವನ್ನು ಬಳಸಿಕೊಳ್ಳುವ ಬಜೆಟ್ ಪ್ರಸ್ತಾವನೆಗಳು ತುಂಬಾ ಸಮಾಧಾನಕರವಾಗಿವೆ. ಇದಕ್ಕಾಗಿ ಬಿಆರ್ ಡಿಸಿಗೆ ವಿಶೇಷವಾಗಿ ಒಂದು ಕೋಟಿ ಮಂಜೂರು ಮಾಡಲಾಗಿದೆ. ಬಜೆಟ್ ಘೋಷಣೆಯಾದ ಬೆನ್ನಲ್ಲೇ ಮತ್ತೆ ದೊಡ್ಡ ಏರ್ ಸ್ಟ್ರಿಪ್ ಚರ್ಚೆಯಾಗುತ್ತಿದೆ. ಸಾಮಾನ್ಯ ಸೇವೆಗೆ ಆದ್ಯತೆ ನೀಡಿ ಪೆರಿಯದಲ್ಲಿ ಏರ್ ಸ್ಟ್ರಿಪ್ ನಿರ್ಮಿಸಬೇಕು ಎಂಬ ಆವಶ್ಯಕತೆ ಉಂಟಾಗಿ ವರ್ಷಗಳೇ ಕಳೆದಿವೆ. ಅಷ್ಟರಲ್ಲಿ ಚರ್ಚೆ ನಿಂತು ಹೋಯಿತು. ಇಡುಕ್ಕಿ, ವಯನಾಡು ಮತ್ತು ಕಾಸರಗೋಡು ಏರ್‍ಸ್ಟ್ರಿಪ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಭೂಸ್ವಾಧೀನ ಸೇರಿದಂತೆ ಆರಂಭಿಕ ಕಾಮಗಾರಿಗೆ ಬಜೆಟ್‍ನಲ್ಲಿ `4.51 ಕೋಟಿ ಮಂಜೂರು ಮಾಡಲಾಗಿದೆ. ಆದಾಗ್ಯೂ, 2020 ರಲ್ಲಿ, ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಪೆರಿಯ ಏರ್‍ಸ್ಟ್ರಿಪ್ ಡಿಪಿಆರ್‍ಗಾಗಿ 1.5 ಕೋಟಿ ರೂ. ಭೂಸ್ವಾಧೀನ ಸೇರಿದಂತೆ ವಿಷಯಗಳನ್ನೂ ಹೇಳಿದ್ದರು.
ಇತರ ಪ್ರಕಟಣೆಗಳು::
ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ಜಿಲ್ಲೆಗೆ 17 ಕೋಟಿ ರೂ. ಘೋಷಿಸಲಾಗಿದೆ. ಆದರೆ ಈ ಮೊತ್ತ ತೀರಾ ಕಡಿಮೆ ಎನ್ನುತ್ತಾರೆ ಸಂತ್ರಸ್ತರು. ಕಾಸರಗೋಡು ಕೆಎಸ್‍ಐಡಿಸಿ ವ್ಯಾಪ್ತಿಯಲ್ಲಿರುವ 1.99 ಎಕರೆ ಭೂಮಿಯನ್ನು ಕೈಗಾರಿಕಾ ಕೇಂದ್ರವನ್ನಾಗಿ ಪರಿವರ್ತಿಸಲು 2.5 ಕೋಟಿ ಮಂಜೂರಾಗಿದೆ. ನವೀಕೃತ ಬಿಎಚ್‍ಇಎಲ್ ಇಎಂಎಲ್‍ಗೆ `10 ಕೋಟಿ ಮಂಜೂರಾಗಿದೆ. ಮಹಾಕವಿ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ನಿರ್ಮಾಣಕ್ಕೆ 40 ಲಕ್ಷ ರೂ. ಘೋಷಿಸಲಾಗಿದೆ. ಚೀಮೇನಿ ಕೈಗಾರಿಕಾ ಪಾರ್ಕ್ ಮತ್ತು ಚೆರುವತ್ತೂರು ವೀರಮಲೆ ಪ್ರವಾಸೋದ್ಯಮ ಯೋಜನೆಗೆ `10 ಕೋಟಿ ಮಂಜೂರಾಗಿದೆ.
ನಿರಾಶಾದಾಯಕ ಎಂದ ಕಾಂಗ್ರೆಸ್:
ರಾಜ್ಯ ಬಜೆಟ್ ಜಿಲ್ಲೆಗೆ ನಿರಾಸೆ ಮೂಡಿಸಿದೆ ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಹಿಂದುಳಿದಿರುವಿಕೆಯನ್ನು ನಿವಾರಿಸಲು ಯುಡಿಎಫ್ ಸರಕಾರ ಜಾರಿಗೊಳಿಸಿದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ್ನು ಬಜೆಟ್ ಕಡೆಗಣಿಸಿದೆ. 75 ಕೋಟಿ ಮೀಸಲಿಟ್ಟರೂ ಅಭಿವೃದ್ಧಿ ಪ್ಯಾಕೇಜ್ ಗೆ ಹೆಚ್ಚಿನ ಪ್ರಯೋಜನವಾಗಿಲ್ಲ, ಬಜೆಟ್ ನಲ್ಲಿ ಸರಕಾರ ವೈದ್ಯಕೀಯ ಕಾಲೇಜನ್ನು ಮರೆತಿದೆ ಎಂದು ಆರೋಪಿಸಿದರು.