ನವದೆಹಲಿ: ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಲಕ್ಷಣಗಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈಗಾಗಲೇ ತೆರೆಮರೆ ಚಟುವಟಿಕೆಗಳನ್ನು ಬಿರುಸುಗೊಳಿಸಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಾರ್ಟಿ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಎರಡೂ ಪಕ್ಷಗಳು ಸಂಪರ್ಕ ಸಾಧಿಸಲು ಯತ್ನಿಸಿದ್ದು, ಫಲಿತಾಂಶ ಹೊರಬೀಳುತ್ತಿದ್ದಂತೆ ರೆಸಾರ್ಟ್ ರಾಜಕಾರಣ ತೀವ್ರಗೊಳ್ಳಬಹುದು ಎನ್ನಲಾಗಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ದೆಹಲಿಗೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪಕ್ಷ ಗೆಲ್ಲಬಹುದಾದ ಸೀಟುಗಳ ಕುರಿತ ಮಾಹಿತಿ ಹಂಚಿಕೊಳ್ಳಲಿದ್ದಾರೆನ್ನಲಾಗಿದೆ. ಇದೇ ವೇಳೆ ಬಿಜೆಪಿ ನಾಯಕರು ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ (ಎಂಜಿಪಿ) ಮುಖಂಡರನ್ನೂ ಸಂರ್ಪಸಿದ್ದಾರೆ. ಏತನ್ಮಧ್ಯೆ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದೇವೆ ಎಂಬ ನಂಬಿಕೆ ಕಾಂಗ್ರೆಸ್ನಲ್ಲಿದ್ದರೂ, ತನ್ನ ಶಾಸಕರನ್ನು ಬಿಜೆಪಿ ಖರೀದಿಸಬಹುದು ಎಂಬ ಭೀತಿಯಿಂದ ಅಭ್ಯರ್ಥಿಗಳನ್ನು ರೆಸಾರ್ಟ್ನಲ್ಲಿ ಇರಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಪ್ರಾದೇಶಿಕ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆಸಿದೆ. ಅಚ್ಚರಿ ಎಂದರೆ, ಆಮ್ ಆದ್ಮಿ ಪಾರ್ಟಿಯೊಂದಿಗೂ ಗೋವಾದಲ್ಲಿ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ ಎಂಬ ಸಂದೇಶ ರವಾನಿಸಿದೆ.
ತೃಣಮೂಲ ಕಾಂಗ್ರೆಸ್ ಕೂಡ ಪರಿಸ್ಥಿತಿಗಳನ್ನು ಅವಲೋಕಿಸಿದ್ದು, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದೆ. ಫಲಿತಾಂಶ ಬಳಿಕ ಕ್ಷಿಪ್ರ ರಾಜಕೀಯ ಬೆಳವಣಿಗೆ ಸಾಧ್ಯತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ರನ್ನು ಹೈಕಮಾಂಡ್ ಗೋವಾಕ್ಕೆ ಕಳುಹಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿದ್ದರೂ, ಬಿಜೆಪಿ ಅಧಿಕಾರ ಹಿಡಿದಿತ್ತು.
ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ವಾರಾ ಣಸಿಯ ಮತ ಎಣಿಕೆ ಕೇಂದ್ರದಿಂದ ಇವಿಎಂಗಳು ಹೊರಹೋಗಿರುವುದನ್ನು ಸಾಬೀತು ಮಾಡಿವೆ. ಇದು ಸರ್ಕಾರದಿಂದ ಆಗಿರುವ ಕಳವು
| ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ
ತಕರಾರು ಅರ್ಜಿ ವಜಾ: ವಿವಿಪ್ಯಾಟ್ (ಮತ ಚಲಾವಣೆ ಮತದಾರನ ಆಯ್ಕೆಯ ಆಭ್ಯರ್ಥಿಗೆ ಸಂದಾಯವಾಗಿದೆ ಎಂಬುದನ್ನು ಖಾತ್ರಿ ಪಡಿಸುವ ಯಂತ್ರ) ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾ ಮಾಡಿದೆ. ಈ ಅರ್ಜಿಯನ್ನು ಮತ ಎಣಿಕೆಗೂ (ಮಾರ್ಚ್ 10ಕ್ಕೆ) ಮುನ್ನ ವಿಚಾರಣೆ ನಡೆಸಲು ಮೊದಲು ಒಪ್ಪಿದ್ದ ನ್ಯಾಯಪೀಠ, ನಂತರ ಸಮಯಾವಕಾಶ ಇಲ್ಲ. ಕಡೆಯ ಹಂತದಲ್ಲಿ ಸೂಚನೆ ನೀಡಲು ಆಗದು ಎಂದು ಹೇಳಿ ಪಿಐಎಲ್ ಅನ್ನು ವಜಾ ಮಾಡಿದೆ.
ಮಣಿಪುರ, ಉತ್ತರಾಖಂಡದಲ್ಲೂ ಕುತೂಹಲ: ಮಣಿಪುರದಲ್ಲೂ ಅಸ್ಪಷ್ಟ ಜನಾದೇಶದ ಸಾಧ್ಯತೆಯಿದ್ದು, ಹಿರಿಯ ಮುಖಂಡರಾದ ಟಿ.ಎಸ್. ಸಿಂಗ್ದೇವ್, ವಿನ್ಸೆಂಟ್ ಪಾಲಾ ಮತ್ತು ಮುಕುಲ್ ವಾಸ್ನಿಕ್ ಅವರು ರಾಜ್ಯಕ್ಕೆ ತೆರಳಿದ್ದಾರೆ. ಕಳೆದ ಚುನಾವಣೆಯಲ್ಲಿ ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿತ್ತು. ಉತ್ತರಾಖಂಡದಲ್ಲಿ ಕೂಡ ಕಾಂಗ್ರೆಸ್-ಬಿಜೆಪಿ ನಡುವೆ ಬಿರುಸಿನ ಚುನಾವಣಾ ಕದನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕೆಲವರು ಕಾಂಗ್ರೆಸ್ ಗೆಲ್ಲುವ ಬಗ್ಗೆ ಹೇಳಿದ್ದರೆ ಮತ್ತೆ ಕೆಲವರು ಬಿಜೆಪಿಗೆ ಸರಳ ಬಹುಮತ ಎಂದಿದ್ದಾರೆ.