ನವದೆಹಲಿ: ಯುದ್ಧಪೀಡಿತ ಉಕ್ರೇನ್ ನಿಂದ ಇದುವರೆಗೆ 17 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರನ್ನು ದೇಶಕ್ಕೆ ಕರೆಸಿಕೊಳ್ಳಲಾಗಿದೆ ಎಂಬ ಕೇಂದ್ರದ ಪ್ರತಿಪಾದನೆಯನ್ನು ಕೊಂಡಾಡಿರುವ ಸುಪ್ರೀಂ ಕೋರ್ಟ್, ಸರ್ಕಾರದ ಪ್ರಯತ್ನ ಶ್ಲಾಘನೀಯ ಆದರೆ ಜನರ ಆತಂಕ ಕಳವಳವನ್ನುಂಟುಮಾಡುತ್ತಿದೆ ಎಂದು ಹೇಳಿದೆ.
ಉಕ್ರೇನ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಅನುಕೂಲವಾಗಲು ಆನ್ ಲೈನ್ ಸಹಾಯವಾಣಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಲು ಮುಂದಾಗಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದು, ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಂತೆ ಉಚ್ಚ ನ್ಯಾಯಾಲಯಗಳಿಗೆ ಸೂಚಿಸಿದೆ.
ಇಲ್ಲಿಯವರೆಗೆ 17 ಸಾವಿರ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದ್ದು ಉಳಿದವರನ್ನು ಕರೆತರುವ ಕೆಲಸವನ್ನು ಸರ್ಕಾರ ಸಮರೋಪಾದಿಯಲ್ಲಿ ಮಾಡುತ್ತಿದೆ ಎಂದು ಸರ್ಕಾರ ಪರ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಂಡಿತು.
ಸರ್ಕಾರ ಉಕ್ರೇನ್ ನಲ್ಲಿರುವ ಭಾರತೀಯರನ್ನು ಸ್ಥಳಾಂತರ ಮಾಡಲು ತೆಗೆದುಕೊಂಡಿರುವ ಕ್ರಮ, ಮಾಡುತ್ತಿರುವ ಕೆಲಸವನ್ನು ಒಂದು ಪದದಲ್ಲಿ ಹೇಳಿದರೆ ಸಾಲದು, ಆದರೆ ಇದರ ಜೊತೆಗೆ ಜನರ ಆತಂಕ ಬಗ್ಗೆ ನಮಗೆ ಕಳವಳವಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಇದರಿಂದಾಚೆಗೆ ರಷ್ಯಾ-ಉಕ್ರೇನ್ ಯುದ್ಧವನ್ನು ದುರದೃಷ್ಟಕರ ಎಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್, ಸಂಧಾನ-ಮಾತುಕತೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಹೇಳಿದ್ದಾರೆ. ಮಾನವ ಜನಾಂಗವು ಯುದ್ಧಗಳನ್ನು ಮಾಡುತ್ತಾ ಜನರನ್ನು ಕೊಲ್ಲುತ್ತಿರುವ ಇತಿಹಾಸದಿಂದ ನಾವು ಪಾಠಗಳನ್ನು ಕಲಿಯದಿರುವುದು ದುರದೃಷ್ಟಕರ. ಸಂಘರ್ಷಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಈ ವಿಚಾರಗಳಲ್ಲಿ ನಾವು ಮಾತನಾಡುವುದಿಲ್ಲ, ಆದರೆ, ವಿದ್ಯಾರ್ಥಿಗಳನ್ನು ಹೇಗೆ ಉಳಿಸುವುದು ಎಂಬುದೇ ನಮಗೆ ಆತಂಕವಾಗಿದೆ' ಎಂದು ನ್ಯಾಯಪೀಠ ಹೇಳಿದೆ.