ನವದೆಹಲಿ:"ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣದಿಂದ ಉದ್ಭವಿಸಿರುವ ಪರಿಸ್ಥಿತಿ ʼನಮ್ಮ ಸಮಸ್ಯೆಯಲ್ಲ' ಎಂಬ ನಿಲುವನ್ನು ಭಾರತ ಹೊಂದಿಲ್ಲ. ನಮ್ಮ ನಿಲುವು ಶಾಂತಿಯ ಪರ, ಉಕ್ರೇನ್ ಪರಿಸ್ಥಿತಿಗೆ ವ್ಯಾಪಾರ ವಹಿವಾಟು ವಿಚಾರಗಳ ನಂಟು ಕಲ್ಪಿಸುವ ಪ್ರಶ್ನೆಯೇ ಇಲ್ಲ" ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು ಹೇಳಿದ್ದಾರೆ.
"ನಮ್ಮ ಸಿದ್ಧಾಂತಗಳ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿದ್ದೇವೆ. ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಗೌರವಿಸಬೇಕೆಂಬ ನಂಬಿಕೆಯ ಆಧಾರದಲ್ಲಿ ನಾವು ಕಾರ್ಯಾಚರಿಸುತ್ತೇವೆ" ಎಂದು ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಕೇರಳದ ಕಾಂಗ್ರೆಸ್ ಸಂಸದ ಕೆ ಮಣಿ ಕೇಳಿದ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಹಿಂಸೆ ಹಾಗೂ ಸಂಘರ್ಷ ತಕ್ಷಣ ನಿಲ್ಲಬೇಕು ಎಂಬುದು ಭಾರತದ ಆಗ್ರಹ, ನಮ್ಮ ದೇಶ ಶಾಂತಿಯ ಪರ ಎಂದು ಅವರು ಹೇಳಿದರು. ರಷ್ಯಾ-ಉಕ್ರೇನ್ ಸಂಘರ್ಷದಿಂದ ಉದ್ಭವಿಸಿರುವ ಸಮಸ್ಯೆ ಬಗ್ಗೆ ಭಾರತಕ್ಕೆ ಅತೀವ ಕಳವಳವಿದೆ ಎಲ್ಲಾ ರೀತಿಯ ಹಿಂಸಾಚಾರ ಅಂತ್ಯಗೊಳ್ಳಬೇಕು ಎಂದು ಅವರು ಹೇಳಿದರು.
ಈ ವಿಚಾರದಲ್ಲಿ ಭಾರತದ ನಿಲುವು ʼಸ್ವಲ್ಪ ಅಸ್ಥಿರವಾಗಿದೆ' ಎಂದು ಅಮೆರಿಕಾ ಇತ್ತೀಚೆಗೆ ಹೇಳಿರುವುದರ ಹಿನ್ನೆಲೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು "ಉಕ್ರೇನ್ ಸನ್ನಿವೇಶ ಹಾಗೂ ವ್ಯಾಪಾರ ವಹಿವಾಟುಗಳಿಗೆ ನಂಟು ಕಲ್ಪಿಸುವ ಪ್ರಶ್ನೆಯಿಲ್ಲ" ಎಂದು ಹೇಳಿದರು.