ಕಾಸರಗೋಡು: ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಹಾಗೂ ಹಸಿರು ಕ್ರಿಯಾ ಸೇನೆÉಯನ್ನು ಸನ್ಮಾನಿಸಲಾಯಿತು.
ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಹಾಲ್ ನಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಉಡುಗೊರೆಗಳನ್ನು ನೀಡಿದರು. ಅಜೈವಿಕ ತ್ಯಾಜ್ಯವನ್ನು ವಿಂಗಡಣೆ ಮಾಡುವಲ್ಲಿ ಮಹತ್ತರವಾದ ಕೆಲಸ ಮಾಡಿದ ಕಿನಾನೂರು ಕರಿಂದಳ ಪಂಚಾಯತ್, ನೀಲೇಶ್ವರ ನಗರಸಭೆ ಹಾಗೂ ಹಸಿರು ಕ್ರಿಯಾ ಸೇನೆಯ ಸದಸ್ಯರು ಹಾಗೂ ಅಜೈವಿಕ ತ್ಯಾಜ್ಯವನ್ನು ಪುಡಿಮಾಡಿ ಸ್ವಚ್ಛತೆಗೆ ಹಸ್ತಾಂತರಿಸುವಲ್ಲಿ ಮಹತ್ತರವಾದ ಕೆಲಸವನ್ನು ಮಾಡಿರುವ ಬೇಡಡ್ಕ ಪಂಚಾಯತ್ ಮತ್ತು ನೀಲೇಶ್ವರ ನಗರಸಭೆಯ ಹಸಿರು ಕ್ರಿಯಾ ಸೇನೆಯ ಸದಸ್ಯರನ್ನು ಗೌರವಿಸಲಾಯಿತು. ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಎ.ಲಕ್ಷ್ಮೀ, ಹರಿತ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಎಂ.ವಿ.ಸುಬ್ರಹ್ಮಣ್ಯನ್, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.