ಪೆರ್ಲ: ಪ್ರತಿ ಮನೆ ಮನೆಗೂ ಕುಡಿನೀರು ಎಂಬ ಧ್ಯೇಯವಾಕ್ಯದಲ್ಲಿ "ಜಲಜೀವನ್" ಯೋಜನೆಯ ಅಂಗವಾಗಿ ಸ್ಥಾಪಿಸುವ ವಾಟರ್ ಅಥೋರಿಟಿಯ ಪೈಪ್ ನಲ್ಲಿ ನೀರು ಬಾರದಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ. ಎಣ್ಮಕಜೆ ಗ್ರಾಮ ಪಂಚಾಯತಿನ ಜನತೆಗಾಗಿ ಇದೀಗ ಸ್ವತಃ ಪಂಚಾಯಥೀ ಅಧ್ಯಕ್ಷರೇ ವಾಟರ್ ಅಥೋರಿಟಿ ವಿರುದ್ಧ ಪ್ರಶ್ನಿಸಿ ಹೋರಾಟಕ್ಕಿಳಿದಿದ್ದು ಈ ಬಗ್ಗೆ ಶೀಘ್ರ ತಕ್ಕ ಕ್ರಮಕೈಗೊಳ್ಳದಿದ್ದಾರೆ. ಮುಂದೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದಾಗಿ ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದೀಚೆ ಎಣ್ಮಕಜೆ ಪಂಚಾಯತಿ ವ್ಯಾಪ್ತಿಯ ವಾರ್ಡ್ ಗಳಲ್ಲಿ ವಾಟರ್ ಅಥೋರಿಟಿಯು ಈ ಯೋಜನೆಯನ್ನು ಜ್ಯಾರಿಗೆ ತಂದಿತ್ತು. ಇದರಂತೆ ಪ್ರತಿ ಮನೆ ಮನೆಗೂ ಪೈಪ್ ಹಾಕಿ ಸುಮಾರು 2 ಸಾವಿರ ಸಂಪರ್ಕ ನೀಡಲಾಗಿತ್ತು. ಬಳಿಕ ತಿಂಗಳ ಅಂತರದಲ್ಲಿ ನೀರಿನ ಬಿಲ್ ಬಂದದ್ದೆ ಹೊರತು ಪೈಪ್ ನಲ್ಲಿ ನೀರು ಹೆಚ್ಚಿನೆಡೆಯೂ ಇದುವರೆಗೆ ಬರಲಿಲ್ಲ ಎಂದು ಜನತೆ ದೂರಿದ್ದರು. ಈ ಬಗ್ಗೆ ಗ್ರಾಮ ಸಭೆಗಳಲ್ಲೂ ದೂರು ಮೂಡಿ ಬಂದ ಕಾರಣ ಸ್ವತಃ ಪಂಚಾಯತು ಅಧ್ಯಕ್ಷರೇ ಮುತುವರ್ಜಿ ವಹಿಸಿ ಕಾಸರಗೋಡಿನ ವಾಟರ್ ಅಥೋರಿಟಿ ಇಲಾಖಾ ಅಧಿಕಾರಿಗಳಲ್ಲಿ ನೇರ ದೂರಿದ್ದರು. ಈ ಕುರಿತು ನಿರಂತರವಾಗಿ ಅಥೋರಿಟಿಯನ್ನು ಸಂಪರ್ಕಿಸಲಾಗಿದ್ದು ಅಂತಿಮವಾಗಿ ಜಿಲ್ಲಾಧಿಕಾರಿಗಳಲ್ಲೂ ವಾಟರ್ ಅಥೋರಿಟಿಯ ಬೇಜಾಬ್ದಾರಿಯ ವಿಷಯ ಪ್ರಸ್ತಾಪಿಸಿ ಗಮನಕ್ಕೆ ತರಲಾಗಿತ್ತು. ಇದೀಗ ಬೇಸಗೆಯಲ್ಲಿ ವಿವಿಧೆಡೆ ಸಹಜವಾಗಿಯೇ ನೀರಿನ ತಾತ್ವರ ಕಂಡು ಬಂದಿದ್ದು ಕುಡಿನೀರಿನ ವ್ಯವಸ್ಥೆ ಸಮರ್ಪಕಗೊಳಿಸಬೇಕೆಂದು ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಅಭಿಮತ:
ಅಡ್ಕಸ್ಥಳ ಹೊಳೆಯಿಂದ ಪೆರ್ಲದ ಗೋಳಿತ್ತಡ್ಕ ಬಳಿ ಇರುವ ವಾಟರ್ ಅಥೋರಿಟಿ ಬೃಹತ್ ಟಾಂಕಿಗೆ ನೀರು ಹಾಯಿಸಿ ಶುದ್ಧಿಕರಣ ನಡೆಸಿ ಪಂಚಾಯತಿನಾದ್ಯಂತ ಕುಡಿನೀರು ವಿತರಿಸುವುದು ವಾಟರ್ ಅಥೋರಿಟಿಯ ಉದ್ದೇಶವಾಗಿತ್ತು. ಇದರಂತೆ 2 ಸಾವಿರ ಸಂಪರ್ಕ ನೀಡಲಾಗಿದೆ. ಆದರೆ ಇದೀಗ ಅಡ್ಕಸ್ಥಳ ಹೊಳೆಯಲ್ಲಿ ಸಾಕಷ್ಟು ಜಲಪ್ರಮಾಣ ಲಭ್ಯವಿದ್ದರೂ ಪಂಚಾಯತಿನ ವಿವಿಧೆಡೆಗೆ ನೀರು ತಲುಪದ ಕಾರಣ ಹಾಗೂ ಯೋಜನೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸದಿದ್ದರೆ ಈ ಬಗ್ಗೆ ಜನಪ್ರತಿನಿಧಿಗಳ ಹಾಗೂ ಜನತೆಯ ಸಹಭಾಗಿತ್ವದಲ್ಲಿ ಬಹಿರಂಗ ಹೋರಾಟಕ್ಕೆ ಮುಂದಾಗುವಂತೆ ತಿಳಿಸಿದ್ದು ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರದ ನೀರಾವರಿ ಇಲಾಖೆಯನ್ನು ಒತ್ತಾಯಿಸಿರುವೆನು.