ನವದೆಹಲಿ: ಶಾಲೆಯಿಂದ ಹೊರಗುಳಿದಿರುವ 11ರಿಂದ 14ರ ವಯೋಮಾನದ ಸುಮಾರು 4 ಲಕ್ಷ ಬಾಲಕಿಯರನ್ನು ಶಿಕ್ಷಣ ವ್ಯವಸ್ಥೆಗೆ ಮರಳಿ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 'ಕನ್ಯಾ ಶಿಕ್ಷಾ ಪ್ರವೇಶ' ಉತ್ಸವಕ್ಕೆ ಸೋಮವಾರ ಚಾಲನೆ ನೀಡಿದೆ.
ಇದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಶಿಕ್ಷಣ ಸಚಿವಾಲಯ ಜಂಟಿಯಾಗಿ ಕೈಗೊಂಡಿರುವ ಕಾರ್ಯಕ್ರಮ.
ಶಾಲೆಯಿಂದ ಹೊರಗುಳಿದಿರುವ ಈ ನಾಲ್ಕು ಲಕ್ಷ ಹದಿಯಹರೆಯದ ಬಾಲಕಿಯರು ಪೂರಕ ಪೌಷ್ಟಿಕಾಂಶ ಹಾಗೂ ಕೌಶಲ ತರಬೇತಿಗಾಗಿ ಅಂಗನವಾಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರನ್ನು ಆದಷ್ಟು ಬೇಗ ಔಪಚಾರಿಕ ಶಾಲಾ ವ್ಯವಸ್ಥೆಗೆ ಕರೆತರಲು ಶ್ರಮಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಇಂದೇವರ್ ಪಾಂಡೆ ಹೇಳಿದರು.
ಈಗಾಗಲೇ ಚಾಲ್ತಿಯಲ್ಲಿರುವ ಹದಿಹರೆಯದ ಬಾಲಕಿಯರ ಯೋಜನೆಯಡಿ (ಎಸ್‌ಎಜಿ) 2018-19ನೇ ಸಾಲಿನಲ್ಲಿ 11.88 ಲಕ್ಷ ಬಾಲಕಿಯರು ಫಲಾನುಭವಿಗಳಾಗಿದ್ದರು. 2021ರಲ್ಲಿ ಈ ಸಂಖ್ಯೆ 5.03 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಪಾಂಡೆ
ಅವರು ಅಂಕಿ ಅಂಶ ಸಹಿತ ಮಾಹಿತಿ ನೀಡಿದರು.