ನವದೆಹಲಿ :ಉಕ್ರೇನ್‌ನ ಈಶಾನ್ಯ ನಗರ ಸುಮಿಯ ತಮ್ಮ ಕಾಲೇಜು ಹಾಸ್ಟೆಲಿನಲ್ಲಿ ಸಿಲುಕಿರುವ 800ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ ಬಾಂಬ್ ಸ್ಫೋಟದ ಶಬ್ದದಿಂದ ಎಚ್ಚರಗೊಂಡಿದ್ದಾರೆ.
ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸಲು ಐಸ್ ಸಂಗ್ರಹಿಸಲು ಹೊರಗೆ ಬರುತ್ತಿದ್ದಾರೆ.
'ನಾನು ಇಂದು ಬೆಳಗ್ಗೆ ಸಹೋದರಿಗೆ ಕರೆ ಮಾಡಿದೆ. ಆಗ ಉಕ್ರೇನ್‌ನಲ್ಲಿ ಬೆಳಗ್ಗೆ 6 ಗಂಟೆಯಾಗಿದ್ದು, ಬಾಂಬ್ ದಾಳಿ ಆರಂಭವಾಗಿತ್ತು. ನಾನು ಅದರ ಶಬ್ದ ಕೇಳಬಹುದಿತ್ತು' ಎಂದು ಎಂದು ಸುಮಿಯಲ್ಲಿ ಸಿಲುಕಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿ ಮಯೂರಿ ಅಹೆರ್ ಅವರ ಸಹೋದರಿ ಡಾ. ಪ್ರಿಯಾಂಕ ಅಹೆರ್ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಿಂದ ಅಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ತಮ್ಮ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸಲು ವಿದ್ಯಾರ್ಥಿಗಳು ಐಸ್ ಸಂಗ್ರಹಿಸಲು ಹೊರಗೆ ಹೋಗಬೇಕಾದ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥೀಗಳನ್ನು ಶೀಘ್ರ ತೆರವುಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿದೆ. ಆದರೆ, ಯಾವಾಗ ತೆರವುಗೊಳಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲದೇ ಇರುವುದರಿಂದ, ವಿದ್ಯಾರ್ಥಿಗಳು ಭರವಸೆ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.