ನವದೆಹಲಿ: ಸಾಲಕ್ಕಾಗಿ ಮಹಿಳೆಯರು ಸಲ್ಲಿಸುವ ಅರ್ಜಿ ತಿರಸ್ಕೃತಗೊಳ್ಳುವ ಪ್ರಮಾಣ ಪುರುಷರು ಅರ್ಜಿ ತಿರಸ್ಕಾರಗೊಳ್ಳುವುದಕ್ಕಿಂತ ದುಪ್ಪಟ್ಟಾಗಿದೆ. ಹಣಕಾಸು ವಿಚಾರದಲ್ಲಿ ಮಹಿಳೆಯರ ಒಳಗೊಳ್ಳುವಿಕೆ ಸ್ಥಿತಿಯಲ್ಲಿ ಒಟ್ಟಾರೆಯಾಗಿ ಸುಧಾರಣೆಯಾದರೂ ಸಾಲ ನಿರಾಕರಣೆ ಸ್ಥಿತಿಯಲ್ಲಿ ತುಂಬಾ ಕೆಟ್ಟ ಸನ್ನಿವೇಶವಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ.
ವಿಶ್ವ ಬ್ಯಾಂಕ್ ಫೈಂಡೆಕ್ಸ್ ವರದಿ ಪ್ರಕಾರ, ಮಹಿಳೆಯರ ಬ್ಯಾಂಕ್ ಖಾತೆಗಳು 2014ರಲ್ಲಿ ಇದ್ದ ಶೇಕಡ 43ರಿಂದ 2017ರಲ್ಲಿ ಶೇಕಡ 77ಕ್ಕೆ ಏರಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ವಾರ್ಷಿಕ ಹಣಕಾಸು ಒಳಗೊಳ್ಳುವಿಕೆ ಸೂಚ್ಯಂಕ (ಎಫ್ಐ-ಇಂಡೆಕ್ಸ್) 2017ರಿಂದ 2021ರ ವರೆಗೆ 10.5 ಅಂಕದಷ್ಟು ಸುಧಾರಿಸಿದೆ. ಆದರೆ, ಸಾಲದ ಲಭ್ಯತೆಯಿದ್ದರೂ ಮಹಿಳೆಯರು ಹಣಕಾಸು ಸೇವೆಗಳನ್ನು ಬಳಸಿಕೊಳ್ಳುವ ಪ್ರಮಾಣದಲ್ಲಿ ಅದು ಪ್ರತಿಫಲನಗೊಳ್ಳುತ್ತಿಲ್ಲ. ಸಾಲ ಮರುಪಾವತಿಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಸ್ತು ಹೊಂದಿದವರಾಗಿದ್ದರೂ ಎರಡು ಪಟ್ಟು ಅಧಿಕ ಸಾಲದ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ. ಈ ತಾರತಮ್ಯ ಮಹಿಳೆಯರು ನಡೆಸುವ ಉದ್ಯಮದ ಸಾಲಕ್ಕೂ ಅನ್ವಯವಾಗುತ್ತದೆ ಎಂದು ವರದಿ ಹೇಳಿದೆ.
ಔಪಚಾರಿಕ ಸಾಲ ಯಾಕೆ ಸಿಗುತ್ತಿಲ್ಲ?: ಔಪಚಾರಿಕ ಸಾಲ ಪಡೆಯಲು ಮಹಿಳೆಯರಿಗೆ ಇನ್ನೂ ಸಾಧ್ಯವಾಗುತ್ತಿಲ್ಲವೇಕೆ ಎಂಬ ಪ್ರಶ್ನೆ ಎದುರಾಗಿದೆ. 2019ರ ಆಲ್ ಇಂಡಿಯಾ ಡೆಟ್ ಆಂಡ್ ಇನ್ವೆಸ್ಟ್ಮೆಂಟ್ ಸರ್ವೆ (ಎಐಡಿಐಎಸ್) ಪ್ರಕಾರ, ಗ್ರಾಮೀಣ ಪ್ರದೇಶಗಳ ಶೇಕಡ 80.7ರಷ್ಟು ಮಹಿಳೆಯರು ಬ್ಯಾಂಕ್ಗಳಲ್ಲಿ ಖಾತೆಗಳ್ನು ಹೊಂದಿದ್ದಾರೆ. ಪುರುಷರ ಪ್ರಮಾಣ ಶೇಕಡ 88.1 ಆಗಿದೆ. ನಗರ ಪ್ರದೇಶಗಳಲ್ಲಿ ಮಹಿಳೆಯರಲ್ಲಿ ಈ ಅನುಪಾತ ತುಸು ಹೆಚ್ಚಾಗಿದೆ, ಅಂದರೆ ಶೇಕಡ 81. 3 ಆಗಿದೆ. ಡಿಜಿಟಲ್ ಆರ್ಥಿಕತೆ ಹೆಚ್ಚಾಗುತ್ತಿದ್ದಂತೆ ಮಹಿಳೆಯರ ಹಣಕಾಸು ಒಳಗೊಳ್ಳುವಿಕೆ ಕೂಡ ಏರಿಕೆಯಾಗಬೇಕೆಂಬ ನಿರೀಕ್ಷೆಯೂ ಹೆಚ್ಚಿದೆ. ಆದರೆ, ಸ್ಮಾರ್ಟ್ಫೋನ್ ಮೂಲಕ ನಡೆಯುವ ಡಿಜಿಟಲ್ ಆರ್ಥಿಕತೆಯ ಲಾಭವನ್ನು ಮಹಿಳೆಯರು ಪಡೆಯಬಹುದೇ ಹಾಗೂ ಹೇಗೆ ಪಡೆಯಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತದಲ್ಲಿ ಶೇಕಡ 41 ಪುರುಷರಲ್ಲಿ ಸ್ಮಾರ್ಟ್ಫೋನ್ ಇದ್ದರೆ ಶೇಕಡ 25 ಮಹಿಳೆಯರು ಅದನ್ನು ಹೊಂದಿದ್ದಾರೆ ಎಂಬುದು 2021ರ ಸಮೀಕ್ಷೆಯಿಂದ ತಿಳಿದು ಬಂದಿದೆ.