ನವದೆಹಲಿ: ದೇಶದ ಸಂಯೋಜಿತ ಕಾಲೇಜುಗಳನ್ನು 2035ರೊಳಗೆ ಪದವಿ ಪ್ರದಾನ ಮಾಡುವ ಬಹುಶಿಸ್ತೀಯ ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ನಿರ್ಧರಿಸಿದ್ದು ಈ ಸಂಬಂಧದ ಹೊಸ ಕರಡು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಜಗತ್ತಿನಾದ್ಯಂತ ಬಹುಶಿಸ್ತೀಯ ಸಂಸ್ಥೆಗಳನ್ನು ಸ್ಥಾಪಿಸುವ ಸಂಸ್ಕೃತಿಯನ್ನು ಒತ್ತಿ ಹೇಳಿರುವ ಯುಜಿಸಿ, ಭಾರತದಲ್ಲಿರುವ ಹಾಲಿ ಕಾಲೇಜುಗಳು ಮತ್ತು ವಿವಿಗಳ ಸ್ವರೂಪವನ್ನು ಬದಲಾಯಿಸುವ ಸಂಬಂಧ ಕರಡು ಮಾರ್ಗಸೂಚಿಗೆ ಮಾರ್ಚ್ 20ರೊಳಗೆ ಸಲಹೆಗಳನ್ನು ಸಲ್ಲಿಸುವಂತೆ ಕೋರಿದೆ.
ಕರಡು ಮಾರ್ಗಸೂಚಿ ಮೂರು ಬಗೆಯ ಬಹು ಶಿಸ್ತೀಯ ಸಂಸ್ಥೆಗಳನ್ನು ಪ್ರಸ್ತಾಪಿಸಿದೆ. ಸಂಶೋಧನಾ- ಕೇಂದ್ರಿತ ವಿವಿಗಳು (ಆರ್ಯುು), ಬೋಧನೆ-ಕೇಂದ್ರಿತ ವಿವಿಗಳು (ಟಿಯು) ಹಾಗೂ ಪದವಿ-ನೀಡಿಕೆ ಸ್ವಾಯತ್ತ ಕಾಲೇಜ್ಗಳು ಎಂದು ವಿಭಾಗಿಸಿದೆ. ಆರ್ಯುು ಮತ್ತು ಟಿಯುಗಳು 3,000 ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ದೊಡ್ಡ ವಿವಿಗಳಾಗಿರುತ್ತವೆ.
2035 ಡೆಡ್ಲೈನ್: ಎಲ್ಲ ಸಂಯೋಜಿತ ಕಾಲೇಜುಗಳನ್ನು 2035ರೊಳಗೆ ಪದವಿ ಪ್ರದಾನ ಮಾಡುವ ಸ್ವಾಯತ್ತ ಸಂಸ್ಥೆಗಳನ್ನಾಗಿ ಮಾಡಬೇಕೆಂದು ಕರಡು ಮಾರ್ಗಸೂಚಿ ಹೇಳಿದೆ. 2030ರೊಳಗೆ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ದೊಡ್ಡ ಬಹುಶಿಸ್ತೀಯ ಉನ್ನತ ಶಿಕ್ಷಣ ಸಂಸ್ಥೆ ಇರಲಿದೆ.
ದ್ವಿ-ಪದವಿ ಕಾರ್ಯಕ್ರಮ: ಎರಡು ಪದವಿ (ಡ್ಯುಯಲ್ ಮೇಜರ್ ಬ್ಯಾಚುಲರ್) ನೀಡುವ ಕಾರ್ಯಕ್ರಮದ ಪ್ರಸ್ತಾಪನೆಯೂ ಯುಜಿಸಿ ಕರಡಿನಲ್ಲಿದೆ. ಆಯ್ಕೆ ಪ್ರಕ್ರಿಯೆ ಆಧಾರದಲ್ಲಿ ಸಂಬಂಧಿತ ನಿಯಂತ್ರಣಾ ಪ್ರಾಧಿಕಾರಗಳು ಈ ಕಾರ್ಯಕ್ರಮದ ಕಾಲೇಜುಗಳಿಗೆ ಮಾನ್ಯತೆ ನೀಡಲಿವೆ.