ಕೀವ್: ಉಕ್ರೇನ್‌ನ 4 ನಗರಗಳಲ್ಲಿ ಮಾನವೀಯ ಕಾರಿಡಾರ್ ರೂಪಿಸುವ ಮೂಲಕ ಅಲ್ಲಿರುವ ಜನರ ಸ್ಥಳಾಂತರಕ್ಕೆ ರಶ್ಯ ರೂಪಿಸಿದ ಯೋಜನೆಯನ್ನು ಉಕ್ರೇನ್ ತಿರಸ್ಕರಿಸಿದ್ದು ಇದೊಂದು ಅನೈತಿಕ ಸಾಹಸ ಎಂದು ಟೀಕಿಸಿದೆ.
ರಶ್ಯ ಪ್ರಸ್ತಾಪಿಸಿದ ಯೋಜನೆಯಂತೆ ಉಕ್ರೇನ್‌ನ ರಾಜಧಾನಿ ಕೀವ್, ಮರಿವುಪೋಲ್, ಪೂರ್ವ ಪ್ರಾಂತದ ನಗರಗಳಾದ ಖಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ( ಭಾರತೀಯ ಕಾಲಮಾನ ಮಧ್ಯಾಹ್ನ 12:30) ಮಾನವೀಯ ಕಾರಿಡಾರ್ ವ್ಯವಸ್ಥೆ ಮಾಡಲಾಗಿದ್ದು ಮುಂದಿನ 11 ಗಂಟೆ ಜಾರಿಯಲ್ಲಿರುತ್ತದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಉಕ್ರೇನ್ ಅಧ್ಯಕ್ಷರ ವಕ್ತಾರರು, ಇದೊಂದು ಅತ್ಯಂತ ಅನೈತಿಕ ಉಪಕ್ರಮವಾಗಿದೆ. ಜನರ ಬವಣೆಯನ್ನು ಬಳಸಿಕೊಂಡು ಟಿವಿಯಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ರಶ್ಯ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಅವರೆಲ್ಲಾ ಉಕ್ರೇನ್‌ನ ಜನತೆ, ಅವರಿಗೆಉಕ್ರೇನ್‌ನ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವ ಹಕ್ಕು ಇದೆ. ರಶ್ಯದ ಇಂತಹ ಅನೈತಿಕ ಉಪಕ್ರಮಗಳು ಕದನ ವಿರಾಮ ವಿಫಲವಾಗಲು ಕಾರಣವಾಗುತ್ತಿದೆ. ತಮ್ಮ ದಿಕ್ಕಿನಲ್ಲಿ ಮಾನವೀಯ ಕಾರಿಡಾರ್ ಸಾಗಿದರೆ ಮಾನವೀಯ ನೆರವು ಒದಗಿಸುವ ಮೂಲಕ ಟಿವಿಯಲ್ಲಿ ಪ್ರಚಾರ ಪಡೆಯಬಹುದು ಎಂಬುದು ರಶ್ಯದ ತಂತ್ರವಾಗಿದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ರಶ್ಯದ ಮೇಲೆ ಇನ್ನಷ್ಟು ಕಠಿಣ ನಿರ್ಬಂಧ ಜಾರಿಗೊಳಿಸುವಂತೆ ಉಕ್ರೇನ್ ಆಗ್ರಹಿಸಿದೆ. ಆಕ್ರಮಣಕಾರರ ಉದ್ಧಟತವನ್ನು ಗಮನಿಸಿದರೆ ರಶ್ಯದ ಮೇಲೆ ವಿಧಿಸಿದ ನಿರ್ಬಂಧ ಸಾಕಾಗದು ಎಂದು ಅಧ್ಯಕ್ಷ ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.
4 ನಗರಗಳಲ್ಲಿ ಯುದ್ಧವಿರಾಮ ಘೋಷಿಸಿದ್ದ ರಶ್ಯ
ಉಕ್ರೇನ್‌ನ ಯುದ್ಧಗ್ರಸ್ತ ನಗರಗಳಲ್ಲಿ ಸಿಕ್ಕಿಬಿದ್ದಿರುವ ಜನರು ಅಲ್ಲಿಂದ ಹೊರತೆರಳಲು ಸುರಕ್ಷಿತ ಮಾನವೀಯ ಕಾರಿಡಾರ್ ನಿರ್ಮಿಸುವ ಉದ್ದೇಶದಿಂದ ಉಕ್ರೇನ್‌ನ ರಾಜಧಾನಿ ಕೀವ್ ಸಹಿತ 3 ನಗರಗಳಲ್ಲಿ ಕದನವಿರಾಮ ಘೋಷಿಸಿರುವುದಾಗಿ ರಶ್ಯ ಸೋಮವಾರ ಹೇಳಿಕೆ ನೀಡಿತ್ತು.
ಖಾರ್ಕಿವ್, ಮರಿವುಪೋಲ್ ಹಾಗೂ ಸುಮಿ ನಗರಗಳಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ(ರಶ್ಯ ಸಮಯ) ಯುದ್ಧವಿರಾಮ ಜಾರಿಗೆ ಬಂದಿದ್ದು ಮುಂದಿನ 11 ಗಂಟೆ ಜಾರಿಯಲ್ಲಿರುತ್ತದೆ ಎಂದು ರಶ್ಯ ಅಧಿಕಾರಿಗಳು ಹೇಳಿದ್ದರು. ಈ ಹಿಂದೆ ಮರಿಯುಪೋಲ್‌ನಲ್ಲಿ ಉಭಯ ದೇಶಗಳು ಒಪ್ಪಿಕೊಂಡಿದ್ದ ಕದನ ವಿರಾಮ ಕೆಲವೇ ಗಂಟೆಗಳಲ್ಲಿ ಮುರಿದುಬಿದ್ದಿತ್ತು. ರಶ್ಯಾದ ಪಡೆ ಫಿರಂಗಿದಾಳಿ ಮತ್ತು ವಾಯುದಾಳಿ ನಡೆಸುವ ಮೂಲಕ ಜನರು ಹೊರತೆರಳಲು ಅಡ್ಡಿ ಪಡಿಸುತ್ತಿದೆ ಎಂದು ಉಕ್ರೇನ್ ದೂರಿತ್ತು.