ಯುದ್ಧಪೀಡಿತ ಪಶ್ಚಿಮ ಉಕ್ರೇನ್‌ನ ಚೆರ್ನ್‌ವಿಸ್ಟಿಯಲ್ಲಿರುವ ಬುಕೊವೀನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 3000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿ ವರ್ಷ 20-25,000 ವೈದ್ಯಾಕಾಂಕ್ಷಿ ವಿದ್ಯಾರ್ಥಿಗಳು ಉಕ್ರೇನ್‌ಗೆ ಹೋಗುತ್ತಾರೆ.
ಭಾರತದ ಖಾಸಗಿ ವೈದ್ಯ ಕಾಲೇಜುಗಳ ಎಂಬಿಬಿಎಸ್ ಸೀಟುಗಳಿಗೆ ಹೋಲಿಸಿದರೆ ಇಲ್ಲಿ ಶುಲ್ಕ ಕಡಿಮೆ ಎನ್ನುವುದು ವಿದ್ಯಾರ್ಥಿಗಳ ಆಕರ್ಷಣೆಗೆ ಪ್ರಮುಖ ಕಾರಣ.
ನಾಲ್ಕನೇ ಒಂದರಷ್ಟು ಭಾರತೀಯ ವಿದ್ಯಾರ್ಥಿಗಳು ಮಿತವ್ಯಯದ ಕಾರಣದಿಂದ ಮತ್ತು ಪಶ್ಚಿಮ ಯೂರೋಪ್‌ಗೆ ಸುಲಭವಾಗಿ ಸಂಪರ್ಕ ಸಾಧಿಸುವ ಪ್ರದೇಶವಾಗಿರುವ ಕಾರಣಕ್ಕೆ ಈ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಉಕ್ರೇನ್‌ನಲ್ಲಿ ನಾಲ್ಕೂವರೆ ವರ್ಷಗಳ ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ 24-30 ಲಕ್ಷ ರೂಪಾಯಿ ವೆಚ್ಚ ತಗುಲುತ್ತದೆ. ಮರೀಷಿಯಸ್ ಮತ್ತು ನೆದರ್ ಲ್ಯಾಂಡ್‌ನಲ್ಲಿ ವೈದ್ಯ ಪದವಿ ಪಡೆಯಬೇಕಾದರೆ 50-55 ಲಕ್ಷ ರೂಪಾಯಿ ವೆಚ್ಚ ಮಾಡಬೇಕು. ಭಾರತದ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್‌ಗೆ 70 ಲಕ್ಷದಿಂದ 1.2 ಕೋಟಿ ವರೆಗೆ ವೆಚ್ಚ ಮಾಡಬೇಕಾಗುತ್ತದೆ.
2021ರಲ್ಲಿ ಭಾರತದ 88120 ಎಂಬಿಬಿಎಸ್ ಸೀಟುಗಳಿಗೆ 15 ಲಕ್ಷ ವಿದ್ಯಾರ್ಥಿಗಳು ನಿಟ್ ಪರೀಕ್ಷೆ ಬರೆದಿದ್ದರು. ಈ ಪೈಕಿ ಸುಮಾರು 50 ಸಾವಿರ ಸೀಟುಗಳು 313 ಸರ್ಕಾರಿ ಕಾಲೇಜುಗಳಲ್ಲಿವೆ.
ಸರ್ಕಾರಿ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳಲು ವಿಫಲರಾದ ವಿದ್ಯಾರ್ಥಿಗಳಿಗೆ ಭಾರತದ ಖಾಸಗಿ ಕಾಲೇಜುಗಳಲ್ಲಿ ಅಧ್ಯಯನ ಮಾಡುವುದಕ್ಕಿಂತ ವಿದೇಶಕ್ಕೆ ಅಧ್ಯಯನಕ್ಕೆ ತೆರಳುವುದು ಸುಲಭದ ಆಯ್ಕೆ. ನೆದರ್ಲೆಂಡ್ಸ್, ರಷ್ಯಾ, ಚೀನಾ, ಮರೀಶಿಯಸ್, ನೇಪಾಳ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲೂ ಪ್ರವೇಶ ಬಯಸುತ್ತಾರೆ ಎಂದು ಸಲಹಾ ತಜ್ಞರು ಹೇಳುತ್ತಾರೆ.
ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ಶುಲ್ಕ, ವಸತಿ, ಪ್ರಯಾಣವೆಚ್ಚ ಎಲ್ಲ ಸೇರಿ 25 ಲಕ್ಷಕ್ಕಿಂತ ಕಡಿಮೆ ವೆಚ್ಚ ತಗುಲುವ ಉಜ್ಬೇಕಿಸ್ತಾನ, ಖಜಕಿಸ್ತಾನ, ಕಿರ್ಗಿಸ್ತಾನದಂಥ ದೇಶಗಳಿದ್ದರೂ, ಬಹುಮಂದಿಯ ಆದ್ಯತೆ ಉಕ್ರೇನ್. ಇದಕ್ಕೆ ಯೂರೋಪಿಯನ್ ಸಂಸ್ಕೃತಿಯ ಪ್ರಭಾವ ಹಾಗೂ ಆ ಬಳಿಕ ಲಭ್ಯವಾಗುವ ಪ್ರಯೋಜನಗಳು ಪ್ರಮುಖ ಕಾರಣ ಎಂದು ಗುರುಕುಲ ಕನ್ಸಲ್ಟೆನ್ಸಿ ಸರ್ವೀಸಸ್‌ನ ಮುಖ್ಯಸ್ಥ ನೀರಜ್ ಚೌರಾಸಿಯಾ ಹೇಳುತ್ತಾರೆ.
ಪಶ್ಚಿಮ ಯೂರೋಪ್ ದೇಶಗಳಿಗೆ ವಿಹಾರ ಪ್ರವಾಸ ಕೈಗೊಳ್ಳಲು ಸುಲಭ ಪ್ರವೇಶ ಸಿಗುವುದು ಹಾಗೂ ಜರ್ಮನಿಯಂತ ದೇಶಗಳಿಗೆ ಉನ್ನತ ಶಿಕ್ಷಣಕ್ಕೆ ತೆರಳಲು ಸುಲಭ ಅವಕಾಶ ಸಿಗುವುದು ಈ ಆಕರ್ಷಣೆಗೆ ಪ್ರಮುಖ ಕಾರಣ.