ಬೇಸಿಗೆ ಕಾಲ ಸಮೀಪಿಸುತ್ತಿದೆ. ಈ ಸಮಯದಲ್ಲಿ ಚರ್ಮವನ್ನು ಹೆಚ್ಚು ಕಾಡುವ ಸಮಸ್ಯೆ ಅಂದ್ರೆ ಟ್ಯಾನಿಂಗ್. ಸ್ವಲ್ಪ ಹೊರಗೆ ಹೋಗಿ ಬಂದರೂ ಸಾಕು, ಸೂರ್ಯನ ಶಾಖಕ್ಕೆ ಚರ್ಮ ಕಂದು ಬಣ್ಣಕ್ಕೆ ತಿರುಗುವುದು. ಇದನ್ನು ತೊಡೆದುಹಾಕಲು ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ. ಆದರೆ, ನಾವಿಂದು ಟ್ಯಾನಿಂಗ್ ಸುಲಭವಾಗಿ ತೆಗೆದುಹಾಕಲು ಕೆಲವು ಗಿಡಮೂಲಿಕೆಗಳ ಪೇಸ್ಟ್‌ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳು ಕಂದುಬಣ್ಣವನ್ನು ತೊಲಗಿಸಿ, ನಿಮ್ಮ ತ್ವಚೆಯ ಬಣ್ಣವನ್ನು ಮರಳಿ ನೀಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ.
ಟ್ಯಾನಿಂಗ್ ನಿವಾರಣೆಗೆ ಗಿಡಮೂಲಿಕೆಗಳ ಪೇಸ್ಟ್ ಬಗ್ಗೆ ಈ ಕೆಳಗೆ ನೀಡಲಾಗಿದೆ:
ಜೇನುತುಪ್ಪ ಮತ್ತು ಪಪ್ಪಾಯಿ:
ಈ ಎರಡೂ ಪದಾರ್ಥಗಳು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುವ ಗುಣಗಳನ್ನು ಹೊಂದಿವೆ. ನೀವು ಮಾಡಬೇಕಾಗಿರುವುದು ಇಷ್ಟೇ..ಒಂದು ಬಟ್ಟಲಿನಲ್ಲಿ ಸ್ವಲ್ಪ ಪಪ್ಪಾಯಿಯನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಈ ಹರ್ಬಲ್ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, 15 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಟ್ಯಾನಿಂಗ್ ನಿವಾರಣೆಯಾಗುತ್ತದೆ.
ಸೌತೆಕಾಯಿ ಮತ್ತು ನಿಂಬೆ:
ವಿಟಮಿನ್ ಸಿ ಸಮೃದ್ಧವಾಗಿರುವ ನಿಂಬೆ, ಟ್ಯಾನಿಂಗ್ ಅನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಜೊತೆಗೆ ಸೌತೆಕಾಯಿ ಚರ್ಮವನ್ನು ತಂಪಾಗಿಸಿ, ತಾಜಾ ಅನುಭವ ನೀಡುವುದು. ಇದಕ್ಕಾಗಿ ನೀವು ಒಂದು ಬಟ್ಟಲಿನಲ್ಲಿ ತುರಿದ ಸೌತೆಕಾಯಿಯನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. ಬೇಸಿಗೆಯಲ್ಲಿ ವಾರಕ್ಕೆ ಮೂರು ಬಾರಿ ಈ ಪೇಸ್ಟ್‌ನ್ನು ಮುಖಕ್ಕೆ ಹಚ್ಚಿ, ಸ್ವಲ್ಪ ಸಮಯದ ಬಳಿಕೆ ತೊಳೆಯಿರಿ.
ಆಲೂಗಡ್ಡೆ ರಸ ಮತ್ತು ಮುಲ್ತಾನಿ ಮಿಟ್ಟಿ: ಟ್ಯಾನಿಂಗ್ ಅನ್ನು ತೆಗೆದುಹಾಕಲು ಆಲೂಗಡ್ಡೆ ರಸವನ್ನು ಬಳಸಲು ತಜ್ಞರು ಶಿಫಾರಸು ಮಾಡುತ್ತಾರೆ. ಒಂದು ಪಾತ್ರೆಯಲ್ಲಿ ಎರಡು ಚಮಚ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಅದಕ್ಕೆ ಮೂರು ಚಮಚ ಆಲೂಗಡ್ಡೆ ರಸವನ್ನು ಮಿಶ್ರಣ ಮಾಡಿ. ಈ ಹರ್ಬಲ್ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, 15 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಮುಲ್ತಾನಿ ಮಿಟ್ಟಿ ಮೊಡವೆಗಳನ್ನು ನಿವಾರಿಸಿದರೆ, ಆಲೂಗಡ್ಡೆ ಟ್ಯಾನಿಂಗ್ ನಿವಾರಿಸುವುದು.
ಸ್ಟ್ರಾಬೆರಿ ಪೇಸ್ಟ್: ಸ್ಟ್ರಾಬೆರಿಯಿಂದ ತಯಾರಿಸಿದ ಈ ಪೇಸ್ಟ್ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಮಾಡಲು, ತುರಿದ ಸ್ಟ್ರಾಬೆರಿಗಳಿಗೆ ಹಾಲಿನ ಕೆನೆ ಮಿಶ್ರಣ ಮಾಡಿ. ಈಗ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ ಮತ್ತು ಸುಮಾರು 10 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.
ಹಾಲು ಮತ್ತು ಕೇಸರಿ: ಅನಾದಿ ಕಾಲದಿಂದಲೂ ಬಿಸಿಲ ಬೇಗೆಯನ್ನು ನಿವಾರಿಸಲು ಕೇಸರಿಯನ್ನು ಬಳಸಲಾಗುತ್ತಿದೆ. ಹಾಲಿಗೆ ಸ್ವಲ್ಪ ಕೇಸರಿ ಬೀಜಗಳನ್ನು ಸೇರಿಸಿ ಮತ್ತು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಟ್ಟ ನಂತರ, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.