ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸೋಮವಾರ ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ಉಕ್ರೇನ್ ನಲ್ಲಿ ಸದ್ಯ ಇರುವ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಮಧ್ಯೆ ಮುಂದುವರಿದಿರುವ ನೇರ ಮಾತುಕತೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಉಕ್ರೇನ್ ನ ಈಶಾನ್ಯ ಭಾಗದ ಸುಮಿ ನಗರದಲ್ಲಿ ಸಿಲುಕಿಹಾಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಉಕ್ರೇನ್ ಅಧ್ಯಕ್ಷರ ನೆರವು ಕೇಳಿದ್ದಾರೆ.
ಸುಮಿ ನಗರದಲ್ಲಿ ಈ ಯುದ್ಧ ಸನ್ನಿವೇಶ ಮಧ್ಯೆ ಸುಮಾರು 700 ಭಾರತೀಯರು ಸಿಲುಕಿಹಾಕಿಕೊಂಡಿದ್ದಾರೆ.
ಉಕ್ರೇನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಉಕ್ರೇನ್ ಸರ್ಕಾರ ನೀಡಿದ ಸಹಾಯಕ್ಕಾಗಿ ಪ್ರಧಾನಿ ಮೋದಿ ಅಧ್ಯಕ್ಷ ಝೆಲೆನ್ಸ್‌ಕಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸುಮಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಉಕ್ರೇನ್ ಸರ್ಕಾರದಿಂದ ಪ್ರಧಾನಿ ನಿರಂತರ ಬೆಂಬಲವನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್-ರಷ್ಯಾ ಮಧ್ಯೆ ಯುದ್ಧ ಆರಂಭವಾದ ನಂತರ ಅಲ್ಲಿನ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಎರಡನೇ ಸಲ ಮಾತುಕತೆ ನಡೆಸುತ್ತಿದ್ದಾರೆ.
ಉಕ್ರೇನ್ ನ ಬುಡಾಪೆಸ್ಟ್ ನಿಂದ ವಿದ್ಯಾರ್ಥಿಗಳ ಕೊನೆಯ ತಂಡವನ್ನು ಕರೆದುಕೊಂಡು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ದೆಹಲಿಗೆ ಬಂದಿಳಿದಿದ್ದಾರೆ.