ಚಂಡೀಗಢ: ಪಂಜಾಬ್‌ನ ಜಲಂಧರ್ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅವರನ್ನು ಸೋಮವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಹಕೋಟ್‌ನ ಮಲ್ಲಿಯನ್ ಕಲಾನ್ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಜಲಂಧರ್(ಗ್ರಾಮೀಣ) ಪೊಲೀಸ್ ಉಪ ಅಧೀಕ್ಷಕ(ನಾಕೋದರ್) ಲಖ್ವಿಂದರ್ ಸಿಂಗ್ ಅವರು ಹೇಳಿದ್ದಾರೆ.
40 ವರ್ಷದ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಇಲ್ಲಿನ ಶಾಹಕೋಟ್‌ನ ನಂಗಲ್ ಅಂಬಿಯಾನ್ ಗ್ರಾಮದವರಾಗಿದ್ದು, ತಮ್ಮ ಕುಟುಂಬದೊಂದಿಗೆ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಆದರೆ ಸಂದೀಪ್ ಅವರು ಪಂಜಾಬ್ ನಲ್ಲಿ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದರು. ಸಂದೀಪ್ ಅವರು ಪಂದ್ಯಾವಳಿ ಸ್ಥಳದಿಂದ ಹೊರಬಂದಾಗ ನಾಲ್ವರು ಅಪರಿಚಿತ ದುಷ್ಕರ್ಮಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದೀಪ್‌ಗೆ ಗುಂಡು ತಗುಲಿದ ನಂತರ, ಅವರನ್ನು ನಾಕೋಡರ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.
ಗುಂಡಿನ ದಾಳಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.