ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕು ಪರಿಣಾಮ ಕುಗಿದ್ದು, ಲಸಿಕೆಯುಕ್ತವಾಗಿದೆ. ಆರ್ಥಿಕ ವಹಿವಾಟು, ಶಾಲೆ, ಕಾಲೇಜುಗಳ ಆರಂಭದ ಜೊತೆಗೆ ಸಮಾಜದಲ್ಲಿ ಸಹಜ ವಾತಾವರಣ ನಿರ್ಮಿಸುವ ಸ್ಥಿತಿ ಮೂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
'ಆದರೂ, ಕೋವಿಡ್ ಮುಂಜಾಗ್ರತೆ ಕ್ರಮಗಳನ್ನು ಪಾಲಿಸುವುದು ಅಗತ್ಯ.
ಈ ವರ್ಷ ಕೋವಿಡ್‌ನಿಂದ ಮೃತಪಟ್ಟವರಲ್ಲಿ ಲಸಿಕೆಯನ್ನು ಪಡೆಯದವರ ಪ್ರಮಾಣ ಶೇ 92ರಷ್ಟು ಇತ್ತು' ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಗುರುವಾರ ಪ್ರಕಟಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವಾಲಯದ ಹಿರಿಯ ಅಧಿಕಾರಿಗಳು, '15-18 ವರ್ಷ ವಯಸ್ಸಿನವರಲ್ಲಿ ಶೇ 74ರಷ್ಟು ಮಂದಿಗೆ ಮೊದಲ ಡೋಸ್ ಹಾಗೂ ಶೇ 39ರಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ' ಎಂದು ತಿಳಿಸಿದರು.
'ಲಸಿಕೆ ನೀಡಿದ್ದರಿಂದಾಗಿ ಕೋವಿಡ್ ಸಾವುಗಳ ಸಂಖ್ಯೆಯು ಗಣನೀಯವಾಗಿ ಕಡಿಮೆ ಆಗಿದೆ. ಇದು ಕ್ಷಿಪ್ರ ಮತ್ತು ಉತ್ತಮ ಬೆಳವಣಿಗೆ. ಸಾವು ತಡೆಯುವಲ್ಲಿ ಮೊದಲ ಡೋಸ್ ಶೇ 98.9, ಎರಡನೇ ಡೋಸ್ ಶೇ 99.3ರಷ್ಟು ಪರಿಣಾಮಕಾರಿಯಾಗಿತ್ತು' ಎಂದರು.
ಪ್ರಸ್ತುತ, ದೇಶದಲ್ಲಿ 29 ಜಿಲ್ಲೆಗಳಲ್ಲಿ ಮಾತ್ರವೇ ಕೋವಿಡ್ ದೃಢೀಕರಣ ಪ್ರಮಾಣ ಶೇ 10ಕ್ಕೂ ಹೆಚ್ಚಾಗಿದೆ. 34 ಜಿಲ್ಲೆಗಳಲ್ಲಿ ಈ ಪ್ರಮಾಣವು ಶೇ 5 ರಿಂದ 10ರಷ್ಟಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.