ನವದೆಹಲಿ: ಐದು ರಾಜ್ಯಗಳ ಚುನಾವಣಾ ಸೋಲಿನ ನಂತರ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಭಾನುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆ ನಡೆಸಲಾಯಿತು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯುವ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುತ್ತಿರುವ ಪಕ್ಷದ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು ದೊಡ್ಡ ಪ್ರಮಾಣದ ಸುಧಾರಣೆಗಳಾಗಬೇಕು ಎಂಬ ಒತ್ತಾಯದ ನಡುವೆ, ಪಕ್ಷದ ಅಧ್ಯಕ್ಷರು ತಕ್ಷಣವೇ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಸಿಡಬ್ಲ್ಯೂಸಿ ಸಭೆಯ ನಂತರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ನಂತರ ಕಾಂಗ್ರೆಸ್ ಚಿಂತನ ಶಿಬಿರವನ್ನು ನಡೆಸಲಿದೆ ಮತ್ತು ಅದಕ್ಕೂ ಮೊದಲು ಸಿಡಬ್ಲ್ಯೂಸಿ ಮತ್ತೆ ಸಭೆ ಸೇರಲಿದೆ ಎಂದು ವೇಣುಗೋಪಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಡಬ್ಲ್ಯೂಸಿ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಪಕ್ಷದ ಎಲ್ಲಾ ನಾಯಕರ ಮಾತುಗಳನ್ನು ಆಲಿಸಿದರು ಮತ್ತು ಪಕ್ಷವನ್ನು ಬಲಪಡಿಸಲು ಅಗತ್ಯವಾದ ಬದಲಾವಣೆಗಳನ್ನು ಮಾಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದರು.
ಸಾಂಸ್ಥಿಕ ಚುನಾವಣೆ ನಡೆಯುವವರೆಗೆ ಸೋನಿಯಾ ಗಾಂಧಿ ಅವರಿಗೆ ಮಾರ್ಗದರ್ಶನ ನೀಡಬೇಕೆಂದು ಸಿಡಬ್ಲ್ಯೂಸಿಯ ಪ್ರತಿಯೊಬ್ಬ ಸದಸ್ಯರು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಾಯಕತ್ವದ ಬಗ್ಗೆ ಸಿಡಬ್ಲ್ಯುಸಿ ಒಮ್ಮತದಿಂದ ವಿಶ್ವಾಸ ವ್ಯಕ್ತಪಡಿಸಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.