ಎಲ್ವಿವ್: ಉಕ್ರೇನ್ ಗಡಿಗೆ ಕೇವಲ 45 ಮೈಲಿ ದೂರದಲ್ಲಿರುವ ಪೊಲೆಂಡ್ ರಾಜಧಾನಿಗೆ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಭೇಟಿ ನೀಡಿದ ಬೆನ್ನಲ್ಲೇ, ಉಕ್ರೇನ್ ನ ಎಲ್ವಿವ್ ನಗರದಲ್ಲಿ ಶನಿವಾರ ಬ್ಯಾಕ್ ಟು ಬ್ಯಾಕ್ ರಾಕೆಟ್ ದಾಳಿ ನಡೆಸಲಾಗಿದೆ.
ಪ್ರಬಲ ಸ್ಫೋಟಗಳು ರಷ್ಯಾದ ಆಕ್ರಮಣದಿಂದ ಉಕ್ರೇನ್ ನ ಇತರ ಭಾಗಗಳಿಂದ ಪಲಾಯನ ಮಾಡುವವರಿಗೆ ಆಶ್ರಯವಾಗಿದ್ದ ನಗರವನ್ನು ಭಯಪಡಿಸಿತು. ಮೊದಲ ಸ್ಫೋಟ ಸಂಭವಿಸಿದ ನಗರದ ಈಶಾನ್ಯ ಹೊರವಲಯದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಗಂಟೆ ಗಟ್ಟಲೇ ಹೊರಹೊಮ್ಮಿತ್ತು, ತದನಂತರ ಎರಡನೇ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿದೆ.
ಮೊದಲ ರಾಕೆಟ್ ದಾಳಿಯಲ್ಲಿ ಐವರು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಆದರೆ. ಎರಡನೇ ರಾಕೆಟ್ ನಿಂದ ಆಗಿರುವ ಅನಾಹುತ ಬಗ್ಗೆ ನಿರ್ದಿಷ್ಠ ಮಾಹಿತಿ ಸಿಕ್ಕಿಲ್ಲ ಎಂದು ಪ್ರಾದೇಶಿಕ ಗೌರ್ವನರ್ ಮ್ಯಾಕ್ಸಿಮ್ ಕೊಜಿಟ್ಸ್ಕಿ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ಕೆಲ ಗಂಟೆಗಳ ಬಳಿಕ, ನಗರದ ಹೊರಗೆ ಮೂರು ಸ್ಫೋಟ ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ಎರಡನೇ ರಾಕೆಟ್ ದಾಳಿಯಲ್ಲಿ ಮೂಲಸೌಕರ್ಯ ವಸ್ತುಗಳಿಗೆ ಗಮನಾರ್ಹ ರೀತಿಯಲ್ಲಿ ಹಾನಿಯಾಗಿದೆ ಎಂದು ಎಲ್ವಿವ್ ಮೇಯರ್ ಆಂಡ್ರಿ ಸಡೋವಿ ಹೇಳಿದ್ದಾರೆ.
ಉಕ್ರೇನ್ ವಿವಿಧ ಕಡೆಗಳಿಂದ ಸ್ಥಳಾಂತರಗೊಂಡಿರುವ ಸಾವಿರಾರು ಜನರು ಎಲ್ವಿವ್ ನಗರ ಸುರಕ್ಷಿತವೆಂದು ಭಾವಿಸಿ, ಅಲ್ಲಿ ನೆಲೆಸಿದ್ದಾರೆ. ಆದರೆ, ಶನಿವಾರ ನಡೆದಿರುವ ಬ್ಯಾಕ್ ಟು ಬ್ಯಾಕ್ ರಾಕೆಟ್ ದಾಳಿ ಅವರಲ್ಲಿ ಭೀತಿಯನ್ನುಂಟು ಮಾಡಿವೆ.