ಬ್ಯಾಂಕಾಕ್: ಸರಕು ಮತ್ತು ಸೇವೆಗಳ ಪಾವತಿ ವಿಭಾಗದಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ರದ್ದುಗೊಳಿಸುತ್ತಿರುವುದಾಗಿ ಥೈಲ್ಯಾಂಡ್ ನ ಭದ್ರತಾ ನಿಯಂತ್ರಕ ಘೋಷಿಸಿದೆ.
ಏಪ್ರಿಲ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಹೂಡಿಕೆ ವಿಭಾಗದಲ್ಲಿ ಕ್ರಿಪ್ಟೋ ಕರೆನ್ಸಿಗಳ ಮೇಲೆ ಯಾವುದೇ ನಿಷೇಧವಿರುವುದಿಲ್ಲ ಎಂದು ಥೈಲ್ಯಾಂಡ್ ಸ್ಪಷ್ಟಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಮೇಲಿನ ಹೂಡಿಕೆ ಹೆಚ್ಚಾಗತೊಡಗಿದೆ.
ದೇಶದ ಆರ್ಥಿಕ ಹಾಗೂ ಹಣಕಾಸು ವ್ಯವಸ್ಥೆಗಳ ಸ್ಥಿರತೆಗೆ ಅಪಾಯ ಒಡ್ಡುತ್ತಿರುವ ಅಕ್ರಮ ಹಣ ವರ್ಗಾವಣೆ ಹಾಗೂ ಇನ್ನಿತರ ಸೈಬರ್ ಕ್ರೈಮ್ ಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಥೈಲ್ಯಾಂಡ್ ಹೇಳಿದೆ.
ಸರಕು ಮತ್ತು ಸೇವಾ ವಿಭಾಗದಲ್ಲಿ ಕ್ರಿಪ್ಟೋ ಕರೆನ್ಸಿಗಳನ್ನು ಉತ್ತೇಜಿಸುವುದು ಹಾಗೂ ಡಿವೈಸ್, ಸಾಫ್ಟ್ ವೇರ್ ಗಳನ್ನು ವಿತರಿಸುವುದನ್ನೂ ನಿಷೇಧಿಸಲಾಗಿದೆ ಎಂದು ಅಲ್ಲಿನ ಭದ್ರತಾ ನಿಯಂತ್ರಕ ಹೇಳಿದೆ.
ಡಿಜಿಟಲ್ ಅಸೆಟ್ ಗಳ ಆಪರೇಟರ್ ಗಳು ತಮ್ಮ ಗ್ರಾಹಕರಿಗೆ ನಿಷೇಧದ ಬಗ್ಗೆ ಎಚ್ಚರಿಕೆ ನೀಡಬೇಕು ನಿಯಮ ಉಲ್ಲಂಘಿಸಿದ್ದೇ ಆದಲ್ಲಿ ಅವರ ಖಾತೆಗಳನ್ನು ರದ್ದುಗೊಳಿಸಬೇಕೆಂದು ಸರ್ಕಾರ ಹೇಳಿದೆ.